Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Wednesday 2 July 2014

ಕಾಡುವ ಕಾಡಿಗೆ.........!



ನಿನ್ನ ಕಣ್ಣುಗಳಿಗೆ ಕಾಡಿಗೆಯ ತೀಡಿಕೊಂಡ
ಆ ಕಪ್ಪು ಕಡ್ಡಿಯನ್ನು ಕೊಟ್ಟುಬಿಡು ಹುಡುಗಿ!
ಈ ಜಗತ್ತಿನ ಅದ್ಭುತ ಕಲಾಕೃತಿಗೆ
ಅಂತಿಮ ರೂಪಕೊಟ್ಟ ಕುಂಚವನ್ನು
ನನ್ನಲ್ಲಿಯೇ ಉಳಿಸಿಕೊಂಡೇ,
ಎಂದು ಕೊಂಚ ಅಧಿಕವಾಗಿಯೇ ಬೀಗಿಬಿಡುತ್ತೇನೆ!
----------------------------------------------------------
ನೀನು ಕನ್ನಡಿಯ ಎದುರು ನಿಂತು ಕಾಡಿಗೆ ತೀಡಿಕೊಳ್ಳುವಂತೆ!
ನಾನು ಕಾಗದದ ಮುಂದೆ ಕುಳಿತು ಕವಿತೆಯನ್ನು ಬರೆಯುತ್ತೇನೆ!
ಎರಡೂ ಸುಂದರವೇ ನಿನಗೆ ಸೇರಿದ ಮೇಲೆ !
----------------------------------------------------------
ಕಾಡಿಗೆಯ ತೀಡಿಕೊಳ್ಳಲು ಕನ್ನಡಿಯೇ ಬೇಕೇ ?!
ನಿನ್ನ ಬಿಂಬವನ್ನು ತೋರಿಸುವ ನನ್ನ ಕಣ್ಣುಗಳು ಸಾಕಾಗುವುದಿಲ್ಲವೇ!?
ನಿನ್ನನ್ನು ಕಂಡ ಕ್ಷಣಗಳನ್ನು ಕನ್ನಡಿ ಶೇಖರಿಸಿಟ್ಟುಕೊಳ್ಳುವುದಿಲ್ಲ
ನಾನಾದರೂ ಕವಿತೆಯಲ್ಲಿ ಕೂಡಿಟ್ಟುಕೊಳ್ಳುತ್ತೇನೆ ಕರುಣೆ ತೋರಿಸುವೆಯಾ !?
----------------------------------------------------------
ಬಂಗಾರವನ್ನು ಸಹ ಬಯಸದವನು ನಾನು,
ನೀನು ಬಳಿದಿಟ್ಟ ಕಾಡಿಗೆಯ ಮೇಲೆ ಮಾತ್ರ ಒಂದು ಕಣ್ಣಿದೆ !
----------------------------------------------------------
ನಾನು ಕವಿಯಾಗಬೇಕು ಎನ್ನುವ ಆಸೆ ಹುಟ್ಟಿ ಬಿಟ್ಟಿದೆ ಹುಡುಗಿ
ಬೆರಳಲ್ಲಿ ನಿನ್ನ ಕಾಡಿಗೆಯ ಕೊಟ್ಟು ಕವಿತೆಯ ಬರೆಯುವುದ ಕಲಿಸುವೆಯಾ ?!
ನೀನು ಕಣ್ಣಿಗೆ ತೀಡಿಕೊಳ್ಳುವಂತೆ!
----------------------------------------------------------
ಅಂದದ ಕವಿತೆಗೆ 'underline' ಮಾಡುವಂತೆ ತಾನೇ ಹುಡುಗಿ
ನೀನು ನಿನ್ನ ಕಣ್ಣುಗಳಿಗೆ ಕಾಡಿಗೆ ತೀಡುವುದು !
----------------------------------------------------------
ಹೇಗಾದರೂ ಮಾಡಿ ನಿನ್ನ ಬಳಿ
ಕಾಡಿ ಬೇಡಿ ಕಾಡಿಗೆಯ ಪಡೆದು ಬಿಡಬೇಕು!
ಕವಿತೆಗೆ ಕಲ್ಪನೆಗಳು ಸಿಗದ ದಿನ ಅದನ್ನು ಬಳಸಿಕೊಳ್ಳಬಹುದು !
----------------------------------------------------------
ನೀನು ಕಾಡಿಗೆಯ ತೀಡಿಕೊಳ್ಳಲು ನನ್ನ ಬೆರಳನ್ನು ಬಳಸಿಕೊಳ್ಳಬಾರದೆ ?!
ನನ್ನನ್ನು ಆಳಲು ಅಂದಕ್ಕೆ ಅಧಿಕಾರ ಕೊಟ್ಟ ಗುರುತಾದರೂ ಉಳಿಯುತ್ತಿತ್ತು !!
----------------------------------------------------------
ನ್ನನ್ನು ಕಾಡುವ ನಿನ್ನ ಕಾಡಿಗೆಯಿಟ್ಟ ಕಣ್ಣುಗಳ ಮೇಲೆ ಕವಿತೆ
ಬರೆದು ಮುಗಿಸಲು ಚೀನಾ ಮಹಾ ಗೋಡೆಯೂ ಸಹ ಸಣ್ಣದೆ !
----------------------------------------------------------
ನಿನ್ನ ಎದುರು ನನ್ನ ಕಣ್ಣೀರನ್ನು ರೆಪ್ಪೆಯೊಳಗೆ ಬಂಧಿಸಿಟ್ಟಿದ್ದು!
ಅದನ್ನು ಕಂಡು ನಿನ್ನ ಕಂಬನಿ ಕಾಡಿಗೆಯೇ ಅಳಿಸಿ ಬಿಡಬಾರದೆಂದು !
----------------------------------------------------------
ನಿನ್ನಾಸೆಯಂತೆ ಪೂರ್ಣಚಂದಿರನಿಗೂ ಕಾಡಿಗೆ ತೀಡಿದೆ,
ಅಂದೇ ಅಮಾವಾಸ್ಯೆಯಾಗಿ ಬಿಟ್ಟಿತು!
----------------------------------------------------------
ತ್ತಿಯನ್ನು ಸಾಣೆ ಹಿಡಿಯುವಂತೆ
ನೀನು ಕಣ್ಣಿಗೆ ಕಾಡಿಗೆಯ ತೀಡುವುದು!
----------------------------------------------------------
ಇಂದು ಬರೆದಿರುವ ಅಷ್ಟೂ ಕಾಡಿಗೆಯ ಕವನಗಳು
ನನ್ನನ್ನು ಅಂದು ನಿನ್ನ ಕಣ್ಣಿಗಿಟ್ಟ ಕಾಡಿಗೆ ಹೇಗೆ ಕಾಡಿತು ಎನ್ನುವುದಕ್ಕೆ ಸಾಕ್ಷಿ !
--------------------------------------


ಕಾಗುಣಿತ ಕಲಿಯದೆಯೇ ಕವಿತೆ ಬರೆಯುವ ಕಲೆ ನಿನ್ನ ಕಾಡಿಗೆಗೆ ಮಾತ್ರವೇ ಗೊತ್ತೇನೋ ಹುಡುಗಿ!
-------------------

ಕಳುವಾದ ನಿನ್ನ ಕಾಡಿಗೆಯನ್ನು ನಾ ನೀಡುವ ಕಾಗದದ ಮೇಲೆ ಹುಡುಕು ಕವಿತೆಯಾಗಿ ಕರಗಿರುತ್ತದೆ!
-----------
ನೀ ಕಾಡಿಗೆ ಇಟ್ಟಿದ್ದೆನೋ ಆ ಕಣ್ಣಿಗೆ ಕಿಡಿ ಹೊತ್ತಿಕೊಂಡಿದ್ದು ನನ್ನೀ ಮನದ ಕಾಡಿಗೆ!
--------------------------------------
ನಾನು ಕವಿಯಾಗುತ್ತೇನೆಂದು ಕನಸಿನಲ್ಲೂ ಕಲ್ಪಿಸಿಕೊಂಡಿರಲಿಲ್ಲ 
ನೀ ನನ್ನೀ ಕೈಯ ಕಿರುಬೆರಳ ತುದಿಯಲ್ಲಿ ಕಾಡಿಗೆಯನ್ನು ತೆಗೆದು ನಿನ್ನ ಆ ಕಣ್ಣುಗಳಿಗೆ ತೀಡುವ ತನಕ!
--------------
ಒಂದೆರೆಡು ಸಾಲುಗಳನ್ನು ಬರೆದು  ನಾ ಕವಿಯೆಂದು ಬೀಗುತ್ತಿದ್ದೆ  ನೂರಾರು ಬಾರಿ ನಿನ್ನಯ 
ಕಣ್ಣುಗಳನ್ನು ಕವಿತೆಯಾಗಿ ತೀಡಿ,  ಏನೂ ತಿಳಿಯದಂತೆ ಮಲಗಿದ್ದ  ಕಾಡಿಗೆಯನ್ನು ಕಾಣುವವರೆಗೂ!

5 comments:

  1. ಕಾಡುವ ಹುಡುಗಿಯ ಕಾಡಿಗೆ ಕಣ್ಣಿಗೆ ಮನಸೋತ ಕವಿಯ ಮಧುರಾಭಿವ್ಯಕ್ತಿ. .

    ReplyDelete
  2. ಕಾಡುವ ಹುಡುಗಿಯ ಕಾಡಿಗೆ ಕಣ್ಣಿಗೆ ಮನಸೋತ ಕವಿಯ ಮಧುರಾಭಿವ್ಯಕ್ತಿ. .

    ReplyDelete
  3. ಅಬ್ಬಬ್ಬಾ.. ಕಾಡಿಗೆಯ ಬಗ್ಗೆ ಇಷ್ಟು ವಿಧವಾಗೆಲ್ಲಾ ಬರೆಯಬಹುದೇ..?
    ಸೂಪರ್‍...

    ReplyDelete
  4. wow Prakash lovely (Y) kaadigege istaadhre inna nimma hudigi sikkaga inna yaava kavanagalu bartthe :) just super :)
    Anu

    ReplyDelete