Easy2comment: Anonymous ಅಂತ select ಮಾಡಿ ದಯವಿಟ್ಟು ನಿಮ್ಮ ಹೆಸರು ಕೊಟ್ಟು ಕಾಮೆಂಟ್ ಮಾಡಿ...

Thursday 21 January 2016

ಜನನಿ



ಗಂಗಾ ಆರ್ಕೆ ನಗರದಲ್ಲಿ ನಾವು ಬೇಕು ಅಂತ ಕೇಳಿದ್ದ ಜಾಗ,
ಕೊಡಕ್ಕೆ ಮಹೇಶ ಒಪ್ಪಿದ್ದಾನೆ ಕಣೋ,
ನಾಳೆನೆ ರಿಜಿಸ್ಟರ್ ಗೆ ರೆಡಿ ಮಾಡು.
ರಂಗನಾಥ ಎನ್ನುವ ಅಣ್ಣನ ಮಾತಿಗೆ ತಮ್ಮ
ಗಂಗಾಧರ...

ಓಹ್ ಹೌದ ಅಣ್ಣಾ, ಎಷ್ಟೇ ಕೇಳಿದ್ರು ಹಣ ಕೊಟ್ಟರೂ ಕೊಡಲ್ಲ ಅಂತ ಇದ್ನಲ್ಲ ಹೇಗೆ ಒಪ್ಪಿದ?
ನಮ್ಮ ಮೇಲೇನೆ ಪೊಲೀಸ್ ಗೆ ದೂರು ಕೊಡ್ತೀನಿ ಅಂತ ಬೇರೆ ಇದ್ನಲ್ಲ.

ಹೌದು ಕಣೋ, ಅವನಿಗೆ ಇದ್ದ ಒಬ್ಬನೇ ಹತ್ತು ವರ್ಷದ ಮಗನ್ನ
ನೆನ್ನೆ ಹುಡುಗರನ್ನ ಬಿಟ್ಟು ಎತ್ತಿಸಿದ್ದೆ,
ಜಾಗ ಕೊಡ್ತೀಯಾ ಅಥವಾ ನಿನ್ನ ಮಗನ್ನ ಅದರಲ್ಲೇ ಹೂತಾಕ್ತೀಯಾ ?

ಎರಡರಲ್ಲಿ ಯಾವುದು ಬೇಕು ನೀನೆ ನಿರ್ಧಾರ ಮಾಡು?!
ಅಂತ ಕೇಳಿದ್ದೆ, ಮನುಷ್ಯರಿಗೆ ಮೊದಲು ಒಂದು ಕಷ್ಟ ಬಂದಾಗ ಅದೇ ದೊಡ್ಡದು ಅಂತ ಇರ್ತಾರೆ, ಅದಕ್ಕಿಂತ ದೊಡ್ಡದು ಬಂದಾಗ ಇದೆಷ್ಟೋ ವಾಸಿ ಅನ್ಕೊಳ್ತಾರೆ,
ಹಾಗೆ ಜಾಗ ಹೋದ್ರೆ ಕಷ್ಟ ಅಂತ ಇದ್ದ ಈಗ ಮಗ ಹೋದ್ರೆ?
ಜನ ಯಾವಾಗಲೂ ಸಣ್ಣ ಕಷ್ಟವನ್ನೇ ಆಯ್ಕೆ ಮಾಡ್ಕೊಳ್ತಾರೆ
ನಮಗೆ ಅದೇ ದೊಡ್ದದಾಗಿರುತ್ತೆ...!


ನಿನ್ ಬಿಡಣ್ಣ.. ಅಷ್ಟಿಲ್ಲದೆ ಇಪ್ಪತೈದು ವರ್ಷದಿಂದ ಮಾರ್ಕೆಟ್ ನಲ್ಲಿ ಹೆಸರು ಹಾಗೆ ಉಳಿಸಿಕೊಂಡ್ ಇರೋನು ನೀನು,
ನಿನ್ನ ಮೀರಿಸೋರು ಯಾರ್ ಇದ್ದಾರೆ ನಿನ್ನದೇ ಹವಾ...

ಪಡೆಯಬೇಕು ಅಂತ ಇರೋದನ್ನ ಪ್ರಾಣ ಕೊಟ್ಟಾದರೂ
ಪಡೆಯಬೇಕು, ಸರಿ ಎಲ್ಲಿ ಪುಟ್ಟಿ,

ತಾತನಿಗೆ ಹುಷಾರ್ ಇಲ್ಲ ಅಂತ ಆಸ್ಪತ್ರೆ ಗೆ ಕರ್ಕೊಂಡ್ ಹೋಗಿದ್ದಾಳೆ,

ತಾಯಿ ಇಲ್ಲದ ಮಗುನ ತಾಯಿಯ ಹಾಗೆ ಸಾಕಿದ
ತಾತ ನ ಮೇಲೆ ಜನನಿಗೆ ಅಪಾರ ಪಿರುತಿ ಕಣೋ ಗಂಗಾ,

ಹೌದಣ್ಣ...

ಪುಟ್ಟಿ ಎಂದು ಎಲ್ಲರಿಂದಲೂ ಪ್ರೀತಿಯಿಂದ ಕರೆಯಲ್ಪಡುವ ಹುಡುಗಿಯೇ
ರಂಗನ ಒಬ್ಬಳೇ ಮುದ್ದಿನ ಮಗಳು ಜನನಿ...

ತಾತನನ್ನು ಕೈ ಹಿಡಿದು ಕೋಣೆಯೊಳಗೆ ಬಿಟ್ಟು ಬಂದ
ಮಗಳನ್ನು ನೋಡಿ,
ಏನ್ ಅಂದ್ರಮ್ಮ ಡಾಕ್ಟ್ರು,

ಏನಿಲ್ಲಪ್ಪ ಅದೇ ವಯಸ್ಸಾಗಿದೆ ಮಂಡಿ ನೋವು ಸಹಜ
ಹುಷಾರ್ ಆಗಿರಕ್ಕೆ ಹೇಳಿ ಅಂತ ಕೆಲವು ಮಾತ್ರೆ ಕೊಟ್ರು ,

ಸರಿಮ,

ಹಾ ಆಮೇಲೆ ಅಪ್ಪಾ ಶಂಕ್ರಣ್ಣ ಒಂದು ಲಕ್ಷ ಬಡ್ಡಿಗೆ ಬೇಕು ಅಂತ ಕೇಳಿ ಹೋಗಿದ್ದಾರೆ,
ಆಮೇಲೆ ಅದ್ಯಾರೋ ಆಟೋ ಸೀನ ಅಂತ ಮೂರು ವಾರದಿಂದ ಕಂತು ಕಟ್ಟಿಲ್ಲ ಅವರ ಆಟೋ ಮೇಲೆ ತಗೊಂಡಿರೋ ಹಣಕ್ಕೆ,

ಹೌದಾ, ಲೋ ಗಂಗಾ, ಒಂದು ಲಕ್ಷ ತಗೊಂಡ್ ಹೋಗಿ ಕೊಟ್ಟು ಬರುವಾಗ,
ಆಟೋ ಮೇಲೆ ತಾನೇ ಹಣ ತಗೊಂಡ್ ಇರೋದು ಆ ಆಟೋ ತಗೊಂಡ್ ಬಂದ್ ಮನೆ ಹತ್ರ ನಿಲ್ಸು ಅವ್ನೇ ಬರ್ತಾನೆ,..
ಬಾಕಿ ಇರೋದೆಲ್ಲಾ ಕಟ್ಟೋವರೆಗೂ ಬಿಡ್ಬೇಡ,
ಅಯ್ತಣ್ಣ,
ಮಾರನೆಯ ದಿನ ಸಂಜೆ ಪುಟ್ಟಿ ಕಾಲೇಜು ಮುಗಿಸಿಕೊಂಡು ಮನೆ ಒಳಗೆ ಬರುತ್ತಾ ಇದ್ದ ಹಾಗೆ, ಕುರುಚಲು ಗಡ್ಡ,
ಉದ್ದನೆಯ ಮುಖ, ಕಡ್ಡಿಯಂತಹ ಮೈಕಟ್ಟು, ತುಸು ಎತ್ತರದ ಹುಡುಗ
ಆಟೋ ಡ್ರೈವರ್ ಗಳ ಸಮವಸ್ತ್ರದಲ್ಲಿ ಕೈಕಟ್ಟಿಕೊಂಡು ರಂಗನ ಮುಂದೆ ನಿಂತಿದ್ದ,
ನೋಡುತ್ತಾ ತನ್ನ ಕೋಣೆಯೊಳಗೆ ಹೋದಳು ಜನನಿ...
ತನ್ನ ಬ್ಯಾಗ್ ಒಳಗಿಟ್ಟು ಹೊರ ಬಂದಳು , ತಂದೆಯ ಬಳಿ ಆಟೋ ಕೊಡುವಂತೆ ಗೋಗರೆಯುತ್ತಿದ್ದದನ್ನು ಕಂಡ ಮೇಲೆ ತಿಳಿಯಿತು
ಅವನೇ ಆಟೋ ಸೀನ...

ಏನ್ರೀ ತಗೊಂಡಿದ್ದ ಹಣಕ್ಕೆ ಬಡ್ಡಿ ಕಂತು ಕಟ್ಟಬೇಕು ಅನ್ನೋ ಜ್ಞಾನ ಇಲ್ವಾ, ಹಣ ಬೇಕು ಅಂದ್ರೆ ಕಾಣೋ ಮನೆಯ ಬಾಗಿಲು
ಆಮೇಲೆ ಕಾಣೋದೆ ಇಲ್ವಾ?
ಹೇಳೋ ಪುಟ್ಟಿ ಕೇಳಿದಕ್ಕೆ ಉತ್ತರ ಹೇಳೋ
ಎಂದು ಚಿಕ್ಕಪ್ಪ ಗಂಗಾ ಗಧರಿಸಿದರು,

ಇಲ್ಲ ಇಲ್ಲಾ ಮೇಡಂ ನೀವೇ ಬುಕ್ ತೆಗೆದು ನೋಡಿ
ನಾನು ಒಂದು ಸಲವೂ ಮಿಸ್ ಮಾಡಿಲ್ಲಾ,
ಈ ಸಲ ಅಜ್ಜಿಗೆ ಮೈ ಹುಷಾರ್ ಇರಲಿಲ್ಲಾ,
ಅವರನ್ನ ಆಸ್ಪತ್ರೆಗೆ ತೋರಿಸಿ, ಮಾತ್ರೆ ಅದು ಇದು ಅಂತ ಖರ್ಚಾಯಿತು, ದುಡಿಯಕ್ಕೆ ಅಂತ ಇರೋದು ಅದೊಂದೇ ಆಟೋ ಅದನ್ನೇ ನೀವ್ ಇಟ್ಕೊಂಡ್ರೆ ನಾನ್ ಹೇಗೆ ಸಾಲ ತೀರಿಸಲಿ, ಇನ್ನೊಂದು ಸಲ ಹೀಗೆ ಮಾಡಿದ್ರೆ ಅಗಾ ಕೊಡಲೇ ಬೇಡಿ,
ಇನ್ನೊಮ್ಮೆ ಹೀಗೆ ಮಾಡಲ್ಲ ನನಗೆ ಅಂತ ಇರೋ ಒಂದೇ ಜೀವ ಅಂದ್ರೆ ಅದು ನಮ್ಮಜ್ಜಿ ಅವರ ಮೇಲೆ ಆಣೆ ಮಾಡಿ ಹೇಳ್ತಾ ಇದ್ದೀನಿ ನಂಬಿ.

ಎನ್ನುವ ಅವನ ಮಾತುಗಳಲ್ಲಿ ಪ್ರಾಮಾಣಿಕತೆ ಇದೆ ಎಂದೆನಿಸಿತು ಜನನಿಗೆ, 
ಒಂದು ಸಲ ಯೋಚಿಸಿ ಹೇಳಿದಳು,
ಹೌದು ಚಿಕ್ಕಪ್ಪ ಅವರೇಳೋದು ಸರಿಯೇ, ಈ ಸಲ ಒಂದು ಅವಕಾಶ ಕೊಡೋಣ, ಮುಂದೆ ಮಿಸ್ ಮಾಡಿದ್ರೆ ಆಮೇಲೆ ಏನ್ ಮಾಡ್ಬೇಕೋ ಅದನ್ನ ಮಾಡಿದ್ರಾಯಿತು,
ಹಂಗೆ ಹೇಳ್ತೀಯ ಪುಟ್ಟಿ ಸರಿ ಕಣಮ್ಮ ನಿನ್ನ ಮಾತಿಗೆ ನೋ ಮರುಮಾತು.
ತಗೊಳೋ ಕೀ ಇನ್ನೊಂದು ಸಲ ಮಿಸ್ ಮಾಡಿದ್ರೆ
ನಿನ್ನ ಆಟೋ ನ ಗುಜೂರಿ ಅಂಗಡಿಯಲ್ಲಿ ನೋಡ್ತೀಯ,
ಹೋಗ್ ಬಾ..
ಇಲ್ಲಣ್ಣ ಖಂಡಿತ ಹಾಗೆ ಮಾಡಲ್ಲ,
ತುಂಬಾ ಥ್ಯಾಂಕ್ಸ್ ಮೇಡಂ, ಎಂದೇಳಿ ಹೊರಟ.

ಒಂದು ವಾರದ ಬಳಿಕ,
ಕಾಲೇಜಿನ ಬಳಿ ಆಟೋದಲಿ ಹೋಗುತ್ತಿದ್ದ ಸೀನನನ್ನು ಕರೆದು ಮಾತನಾಡಿಸಿದಳು ಜನನಿ,
ಏನ್ರೀ ಈ ಕಡೆ,

ಆಟೋದವನು ಹೋಗದ ದಾರಿ ಇಲ್ಲ ಮೇಡಂ,

ಅದೇನೋ ಸರಿನೆ ಬಿಡಿ,
ಆಮೇಲೆ ನನ್ನ ಟೂ ವೀಲರ್ ರಿಪೇರಿ ಇದೆ ಮಾಡಿಸಬೇಕು,
ಫುಲ್ ಕ್ಲಿಯರ್ ಆಗಿ ಮಾಡಿಕೊಡಕ್ಕೆ ಮೂರಿಂದ ನಾಲಕ್ಕು ದಿನ ಬೇಕು ಅಂದಿದ್ದಾರೆ. ನನ್ನ ಮನೆಯಿಂದ ಕಾಲೇಜಿಗೆ
ಕಾಲೇಜಿನಿಂದ ಮನೆಗೆ ಡ್ರಾಪ್ ಮಾಡಕ್ಕೆ ಆಗುತ್ತ?

ಖಂಡಿತ, ಆಗಲ್ಲ...

ಏನ್ರೀ ಸುಮ್ನೆ ಏನ್ ಮಾಡ್ಬೇಡಿ ಕಾಸ್ ತಗೋಳಿ,

ನಾನ್ ಆ ಟೈಮ್ ಗೆ ಎಲ್ಲೋ ಇರ್ತೀನಿ ಅಲ್ಲಿಂದ ಸುಮ್ನೆ ಬಂದು ನಿಮ್ನ ಕರ್ಕೊಂಡ್ ಹೋಗಿ ಬಿಡೋದು ಅಂದ್ರೆ ನನಗೆ ಲಾಸ್ ಜಾಸ್ತಿ ಮೇಡಂ,

ಅಯ್ಯೋ ಬಿಡ್ರಿ ಮೀಟರ್ ಮೇಲೆ ನೂರು ರೂಪಾಯಿ ತಗೋಳಿ,

ಮೀಟರ್ ಬಡ್ಡಿತಗೊಳೋರು ಮೀಟರ್ ಮೇಲೆ ಕೊಡದೆ ಇರ್ತೀರಾ
ಎಂದು ಮೆಲ್ಲನೆ ಗೊಣಗಿಕೊಂಡ.
ಏನ್ರೀ ಏನೋ ಗೊಣಗುತ್ತಾ ಇದ್ದೀರಾ?
ಏನಿಲ್ಲ ಮೇಡಂ, ಖಂಡಿತ ಹಾಗಾದ್ರೆ ನಾವ್ ಹಾಜರ್ ಅಗತೀವಿ ಅನ್ನೋಕ್ಕೆ ಬಂದೆ.
ಮಾರನೆಯ ದಿನ ಬೆಳಗ್ಗೆಯೇ ಬಂದು ಜನನಿಯನ್ನು
ಕಾಲೇಜಿಗೆ ಕರೆದುಕೊಂಡು ಹೋಗಿ ಬಿಟ್ಟು,
ಸಂಜೆ ಕರೆದುಕೊಂಡು ಬರುತ್ತಿದ್ದಾ,
ಮೌನವಾಗಿದ್ದವನನ್ನು ಜನನಿ ಮಾತಿಗೆಳೆದಳು,
ಏನ್ರೀ ಮಾತಿಲ್ಲಾ, ಆಟೋ ಸೀನಾ ಇವತ್ತು ಸೈಲೆಂಟ್ ಸೀನ ಆಗಿದ್ದೀರಾ?

ಏನಿಲ್ಲ ಮೇಡಂ ನೀವ್ ಮಾತಾಡಿಸಿದ್ರೆ ಮಾತಾಡ್ತೀನಿ,
ಪ್ರಶ್ನೆ ಕೇಳಿದ್ರೆ ಉತ್ತರ ಕೊಡ್ತೀನಿ,

ಏನ್ ನೀವ್ ಹಾಗಾದ್ರೆ ಉತ್ತರ ಕುಮಾರನ ,

ಹಲೋ ಮೇಡಂ ನಾವೇನ್ ಉತ್ತರಕುಮಾರ ಅಲ್ಲಾ,
ನಮ್ಮ ಏರಿಯದಲ್ಲಿ ಏನೇ ಗಲಾಟೆ ಇರಲಿ
ನಾವ್ ಇಲ್ದೆ ಇರಲ್ಲ,
ನಾವೇನ್ ಸಾಯಿಕುಮಾರ್ ಸ್ಟೈಲ್ ನಲ್ಲಿ ಹೇಳೋ ಹಾಗೆ
ಹೇಯ್ ಗಾಂ* ಬೇಡ ಬಿಡಿ,
ಹೆಣ್ ಮಕ್ಳ ಮುಂದೆ ಅದೆಲ್ಲಾ ಹೇಳ್ಬಾರ್ದು.

ಅಯ್ಯೋ ಯಾಕ್ರೀ ಹೇಯ್ ಗಾಂಡು ಅಂತಾರ,
ಎಂದು ಜನನಿ ಸಾಯಿಕುಮಾರ್ ಸ್ಟೈಲ್ ನಲ್ಲಿಯೇ ಹೇಳಿದ ಕೂಡ್ಲೇ ಶಾಕ್ ಆದ ಸೀನ.

ಅಬ್ಬಾ ಏನ್ರೀ ಇಂತ ಕೆಟ್ಟ ಮಾತೆಲ್ಲಾ ಗೊತ್ತಾ,

ಇದೆಲ್ಲಾ ಕೆಟ್ಟ ಮಾತಲ್ಲ, ಕೆಟ್ಟ ಮಾತು ಹೇಗಿರುತ್ತೆ ಹೇಳ್ಲ?

ಬೇಡ ಬೇಡ,

ಯಾಕ್ರೀ ಹೇಳ್ತೀನಿ ಕೇಳಿ,

ಅಯ್ಯೋ ಅದೇನ್ ಸುಪ್ರಭಾತನ ಕೇಳಿದ್ರೆ ಪುಣ್ಯ ಬರಕ್ಕೆ,
ಮುಂದೆ ಕಂತು ಕಟ್ಟದೆ ಇದ್ದಾಗ ಬೇಕಾಗುತ್ತೆ ಬಿಡಿ ಆಗ ಆಡಿ,

ಹಹಹಃ, ಆಟೋ ಹಿಂದೆ
‘’ಈಗ ಸಾಧಿಸಿರುವುದೆಲ್ಲವೂ ಹಿಂದೊಮ್ಮೆ ಯೋಚನೆಗೂ ನಿಲುಕದಾಗಿತ್ತು’’ ಅಂತ ಬರೆದಿದ್ದೀರ ಅದು ಹೇಗೆ ವಿವರಿಸಿ?

ಹೌದು ಮೇಡಂ, ಹಿಂದೆ ನಾನ್ ಚಿಕ್ಕ ಹುಡುಗ ಆಗಿದ್ದಾಗ,
ಡುರ್ರ್ ಅಂತ ಟೈರ್ ನ ಓಡಿಸಿಕೊಂಡು ಹೋಗುವಾಗ
ನಾನ್ ಯೋಚನೆ ಕೂಡ ಮಾಡಿರಲಿಲ್ಲ ಮುಂದೆ
ನನ್ನದೇ ಸ್ವಂತ ಆಟೋ ತಗೊಳ್ತೀನಿ ಅಂತ,
ಈಗ ನನ್ನದೇ ಒಂದು ಗಾಡಿ ಇದೆ ಅದಕ್ಕೆ ನಾನೇ ಮಾಲೀಕ ಅನ್ನೋದು ನನಗೆ ಹೆಮ್ಮೆ ಮೇಡಂ,
ಕಾರ್ ತಗೊಳೋ ಶಕ್ತಿ ಇರೋ ನಿಮಗೆ
ಆಟೋ ಅನ್ನೋದು ಸಾಧಾರಣ ಅನ್ನಿಸಬಹುದು,
ಆದರೆ ಸೈಕಲ್ ಕೂಡ ತಗೊಳೋಕ್ಕೆ ಕಷ್ಟ ಪಡುವ ನಮಗೆ ಆಟೋ ಅನ್ನೋದು ಅದ್ಭುತವೇ ಸರಿ,

ಸೀನನ ಮಾತುಗಳನ್ನು ಕೇಳಿಸಿಕೊಳ್ಳುತ್ತಾ
ಬರುತ್ತಾ ಇದ್ದ ಹಾಗೆ ಮನೆಯೂ ಬಂದಿತು,

ಸರಿ ಕಣ್ರೀ ಇನ್ನು ನಮ್ಮ ನಿಮ್ಮ ಭೇಟಿ ನಾಳೆ...

ಮಾರನೆಯ ದಿನ ಸಂಜೆಯೂ ಅವರಿಬ್ಬರ ಮಾತಿನ ಮೆರವಣಿಗೆ ಸಾಗಿತು,

ನನಗೊಂದು ಅನುಮಾನ ಸೀನ ಅವರೇ,

ಹೇಳಿ ಮೇಡಂ ,

ಹಲವಾರು ಆಟೋ ಡ್ರೈವರ್ ಗಳು ಮೀಟರ್ ಮೇಲೆ ಕೇಳ್ತಾರಲ್ಲ ಯಾಕೆ?

ಅವರು ನನ್ನ ಹಾಗೆ ಮೀಟರ್ ಬಡ್ಡಿಗೆ ಸಾಲ ಮಾಡಿರಬೇಕು
ಅದಕ್ಕೆ ಮೀಟರ್ ಮೇಲೆ ಕೇಳ್ತಾರೆ,

ಹಹಹಹ, ಚೆನ್ನಾಗಿದೆ ಉತ್ತರ, ಆಮೇಲೆ
ಅವತ್ತು ನನಗೆ ಅಂತ ಇರೋದು ಒಂದೇ ಒಂದು ಜೀವ ಅದು ನಮ್ಮಜ್ಜಿ ಅಂದ್ರಲ್ಲ, if you don't mind  ನಿಮ್ಮ ಹೆತ್ತವರು?

ನನ್ನ ತಂದೆ,ತಾಯಿ ಇಬ್ಬರೂ ಮಣ್ಣು ಹೊರುವ ಕೆಲಸಕ್ಕೆ ಹೋಗ್ತಾ ಇದ್ರು, ಒಂದು ದಿನ ನನಗೆ ಹತ್ತು ವರ್ಷವಾಗಿದ್ದಾಗ
ಮಣ್ಣು ಕುಸಿತದಿಂದ ಇಬ್ಬರೂ ಒಟ್ಟಿಗೆ.....

ಒಹ್ sorry..

ಆಮೇಲೆ ನಾವು ಹಳ್ಳಿ ಬಿಟ್ಟು ಇಲ್ಲಿಗೆ ಬಂದೋ,
ಅಜ್ಜಿ ಹೂ ಕಟ್ಟಿ ಮಾರಿ  ನನ್ನ ಸಾಕೀತು,
ನಾನು ಆರನೆ ಕ್ಲಾಸ್ ವರೆಗೂ ಓದಿದೆ ಆಮೇಲೆ
ಓದೋದು ಬಾಡಿಗೆ ಊಟ ಎಲ್ಲವನ್ನೂ ಕಷ್ಟ ಆಯಿತು
ಅದಕ್ಕೆ ಸ್ಕೂಲ್ ಬಿಟ್ಟು, ಗುಜೂರಿ ಅಂಗಡಿ,
ಬಟ್ಟೆ ಅಂಗಡಿ ಅಂತ ಕೆಲಸ ಮಾಡಿ ಬರೋ ಸಂಬಳನ ಅಜ್ಜಿ ಕೈಗೆ ಕೊಡ್ತಾ ಇದ್ದೆ, ಅವರು ಅದರ ಜೊತೆ ಅವರ ಹಣವೂ ಹಾಕಿ
ಒಂದು ಕಡೆ ಚೀಟಿ ಹಾಕಿದ್ರು ಅದರಲ್ಲಿ ಬಂದ ಹಣದಲ್ಲೇ
ಹಾಗೆ ಲೋನ್ ತಗೊಂಡು ಈ ಆಟೋ ತಗೊಂಡೆ,
ಅಲ್ಲಿಂದ ಹಣದ ವಿಷಯದಲ್ಲಿ ಸ್ವಲ್ಪ ಸುಧಾರಿಸಿದೋ.

ಪರವಾಗಿಲ್ಲ ಕಣ್ರೀ ಸೂಪರ್, ಮತ್ತೆ ಯಾಕೆ ನಮ್ಮಪ್ಪನ ಹತ್ರ
ಆಟೋ ನ ಅಡಮಾನ ಇಟ್ಟು ಹಣ ತಗೊಂಡಿದ್ದು ?


ನನ್ನ ಫ್ರೆಂಡ್ ಅಕ್ಕನಿಗೆ ಅವನ ಆಟೋ ಮಾರಿ ಮದುವೆ ಮಾಡಿದ,
ಈಗ ವರದಕ್ಷಣೆ ಕೊಡು ಅಂತ ಅವರ ಭಾವ ಕೇಳ್ತಾ ಹಿಂಸಿಸುತ್ತಾ ಇದ್ರು,
ಅದಕ್ಕೆ ಸ್ವಲ್ಪ ಹಣ ಬೇಕಿತ್ತು ಅಂತ ಕೇಳಿದ ನಾನು ಕೊಡದೆ ಇದ್ರೆ
ಅವರಕ್ಕ ಮನೆಗೆ ಬಂದು ಬಿಡೋರು,
ಅದಕ್ಕೆ ಕೊಟ್ಟೆ,

ಒಹ್ ಕಲಿಯುಗದ ಕರ್ಣ ಅನ್ನಿ

ಅಯ್ಯೋ ಅಷ್ಟೆಲ್ಲಾ ಏನಿಲ್ಲ ನಾನ್ ಅವರ ಮನೆಯಲ್ಲಿ ಅದೆಷ್ಟೋ ಸಲ ಊಟ ಮಾಡಿದ್ದೀನಿ
ನಾವಿಬ್ಬರೂ ಚಡ್ಡಿದೋಸ್ತು ಅದಕ್ಕೆ ಅವರಕ್ಕ ನಮ್ಮಕ್ಕ ಇದ್ದ ಹಾಗೆ.

ಓಹ್ ಓಕೆ ಓಕೆ ಒಂದು ದಿನ ಬಂದು,
ನಿಮ್ಮಜ್ಜಿನ ನೋಡಿಬೇಕು ಅನ್ನಿಸುತ್ತೆ..

ಖಂಡಿತ ಬನ್ನಿ
ಈ ಬಡವನ ಮನೆಗೆ ಬಡ್ಡಿಗೆ ಬಿಡೋ ಭಾಗ್ಯ ಲಕ್ಷಿ ಬಂದ ಹಾಗೆ ಇರುತ್ತೆ ಛೆ ಅಲ್ಲಾ ಭಾಗ್ಯ ಲಕ್ಷಿ ಇದ್ದ ಹಾಗೆ ಇರುತ್ತೆ ಅಂತ ಹೇಳಕ್ಕೆ ಬಂದೆ,

ಯಾಕ್ರೀ ಹೇಗಿದೆ ಮೈಗೆ ಬಡ್ಡಿಗೆ ಬಡ್ಡಿ ಹಾಕಿದ್ರೇನೆ
ನಿಮಗೆ ಬುದ್ಧಿ ಬರೋದು!

ಅಯ್ಯೋ ಬೇಡ ಬೇಡ ನಾನು ಬಡವರಲ್ಲೇ ಕಡುಬಡವ

ಹೌದು ಗಡವನೆ ಛೆ ಅಲ್ಲ ಬಡವನೇ

ಓಹ್ ನಮಗೆ ಪಂಚ್ ಅಹ ಇರಲಿ ಆಮೇಲೆ ಒಂದು ಮಾತು ಕೇಳ್ಲ ನಿಮಗೆ ಬೇಜಾರ್ ಇಲ್ಲಾಂದ್ರೆ?

ಖಂಡಿತ ಕೇಳಿ...

ನಾನ್ ತುಂಬಾ ಸಲ ನಿಮ್ಮ ಮನೆಗೆ ಬಂದಿದ್ದೀನಿ
ಒಂದು ದಿನವೂ ನಿಮ್ಮ ಅಮ್ಮನ್ನ ನೋಡಿಲ್ಲಾ?
ಬರೀ ನಿಮ್ಮಪ್ಪ ಆಮೇಲೆ ನಿಮ್ಮ  ಗಿರಿಜಾ ಮೀಸೆ ಚಿಕ್ಕಪ್ಪಾನೆ ಇರ್ತಾರಲ್ಲ.

ನಮ್ಮ ಅಮ್ಮ ಇದ್ದರೆ ತಾನೇ ನೀವು ನೋಡಕ್ಕೆ ,
ಎಂದೇಳಿದ ಜನನಿಯ ಮುಖದಲ್ಲಿ ನೋವಿನ ಛಾಯೆ.

ಓಹ್ ನೋವಾಗಿದ್ದರೆ ಕ್ಷಮಿಸು,
ಫೋಟೋ ಕೂಡ ಇರ್ಲಿಲ್ವಲ್ಲ ಹಾಗಾಗಿ ಕೇಳಿದೆ,

ಅವರು ಸತ್ತಿಲ್ಲಾ ಇದ್ದಾರೆ ಆದರೆ ನಮ್ಮ ಜೋತೆಯಿಲ್ಲಷ್ಟೇ !

ಮುಂದೇನಾದರೂ ಕೇಳಿದರೆ ಅವಳಿಗೆ ನೋವಾಗಬಹುದೇನೋ ಎಂದು ಸೀನ ಸುಮ್ಮನಾದ.

ಜನನಿಯೇ ಹೇಳ ತೊಡಗಿದಳು...
ನಮ್ಮ ಅಮ್ಮ ಇದಿದ್ದು ಹಳ್ಳಿಯಲ್ಲಿ ಅಲ್ಲಿಯೇ ಅವರು
ಯಾರನ್ನೋ ಪ್ರೀತಿಸಿದ್ದಾರೆ,
ಅವರು ಹಣ.ಜಾತಿಯಲ್ಲಿ ನಮಗಿಂತ ಕೆಳಗಿದ್ದರು ಅನ್ನೋ ಕಾರಣ ನಮ್ಮ ತಾತ ಅಜ್ಜಿ ಅವರನ್ನ ಬಲವಂತವಾಗಿ ನನ್ನ ತಂದೆಗೆ ಮದುವೆ ಮಾಡಿಕೊಟ್ಟರು, ಹೇಗೋ ಒಲ್ಲದ ಮನಸಿನಲ್ಲಿಯೇ ಸಂಸಾರ ಮಾಡ್ತಾ ಇದರಂತೆ, ಅವರು ಗರ್ಭಿಣಿ ಆದ ಮೇಲೆ
ಮೊದಲ ಹೆರಿಗೆಗೆ ಅಂತ ತವರು ಮನೆಗೆ ಹೋದರಂತೆ..
ಅಲ್ಲಿ ತನ್ನ ಹಳೆಯ ಪ್ರೇಮಿಯನ್ನ ನೋಡಿ ,
ನನ್ನ ಹೆತ್ತು ಕೊಟ್ಟು ಅವರು ಅವರ ಪ್ರೇಮಿಯ ಜೊತೆ ಹೋದರಂತೆ,,ಎಲ್ಲಿದ್ದಾರೋ ಹೇಗಿದ್ದಾರೋ ಗೊತ್ತಿಲ್ಲಾ,
ಇನ್ನೊಂದು ಮದುವೆ ಮಾಡಿಕೊಳ್ಳದೆ ನನ್ನ ತಂದೆಯೇ ನನ್ನ ಸಾಕಿದರು, ನನ್ನ ನೋಡಿಕೊಳ್ಳುವುದಕ್ಕಾಗಿಯೇ ಒಬ್ಬರು ಹಿರಿಯರನ್ನ ನೆಮಿಸಿದ್ರು, ಅವರದು ವಿಚಿತ್ರ ಕಥೆ,
ಜಾತಕದಲ್ಲಿ ಏನೋ ದೋಷ ಇತ್ತು ಅಂತ ಮಾವನ ಮಗಳ ಜೊತೆ ನಡೆಯಬೇಕಿದ್ದ ಮದುವೆ ನಿಂತು ಬಿಟ್ಟಿತಂತೆ ಅದಾದ ಮೇಲೆ ಅವರು ಮದುವೆಯೇ ಮಾಡಿಕೊಳ್ಳದೆ ನಮ್ಮ ಮನೆಯಲ್ಲಿಯೇ ಇದ್ದಾರೆ ನನ್ನ ಸ್ವಂತ ಮಗಳ ಹಾಗೆ ನೋಡಿಕೊಂಡು...

ಮನೆಯ ಹತ್ರ ಆಟೋ ಬಂದು ನಿಂತಿತು,,
ಅವಳು ಏನೂ ಹೇಳದೆ ಒಳ ಹೋದಳು, ಅವನು ಮುಂದೆ ಸಾಗಿದ ಅವಲೇಳಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಲೇ....

ಎರಡು ದಿನಗಳ ನಂತರ
ಮಧ್ಯಾನ ಸೀನನಿಗೆ ಜನನಿ ಕರೆ ಮಾಡಿ ಬರಹೇಳಿದಳು,
ಗಾಡಿ ಬಂದ ಕೂಡಲೇ ಹತ್ತಿಕುಳಿತುಕೊಂಡಳು,

ಏನ್ರೀ ಇವತ್ತು ಬೇಗಾ?

ನನಗೆ ಪಾಠ ಮಾಡೋ ಒಬ್ಬರು ಪ್ರೊಫೆಸ್ಸರ್ ಬಂದಿರಲಿಲ್ಲ.ಹಾಗಾಗಿ ಬಂದು ಬಿಟ್ಟೆ ಬೇಗಾ ಬಂದೆ ಬಟ್ ಬೇಗಾ ಮನೆಗೆ ಹೋಗಿ ಏನ್ ಮಾಡೋದು ಅಂತ ಯೋಚನೆ.

ಫಿಲಂ ಗೆ ಹೋಗಿ..

ಅಯ್ಯೋ ಎಲ್ಲಾ ಫಿಲಂ ನೋಡಿ ಆಯಿತು,,

ಉದ್ದಾರ.

ಸರಿ ನಡೀರಿ ನಿಮ್ಮ ಮನೆಗೆ ಹೋಗೋಣ..

ಏನು ನಮ್ಮ ಮನೆಗಾ?

ಯಾಕ್ರೀ ಗಾಬರಿ ನಾನ್ ಏನ್ ರಾಬರಿ ಮಾಡಲ್ಲ ಬನ್ನಿ

ಅಯ್ಯೋ ಅಲೆನ್ ಚಿನ್ನ ವಜ್ರ ಇದೆಯಾ ರಾಬರಿ ಮಾಡಕ್ಕೆ
ದಿಢೀರ್ ಅಂತ ಹೇಳಿದ್ರೆ ಹೇಗೆ ಸರಿ ಬನ್ನಿ...

ಎಂದು ತನ್ನ ಮನೆಯ ಬಳಿ ಬಂದು ನಿಂತ...

ಇದೆ ಮೊದಲ ಬಾರಿಗೆ ಒಂದು ಹುಡುಗಿ ಜೊತೆ ಬರುವ ಸೀನನ ಕಂಡು
ಅಜ್ಜಿಗೆ ಅಚ್ಚರಿ..

ಇವರೇ ನೋಡಿ ನನ್ನ ಮುದ್ದು ಅಜ್ಜಿ...
ಎಂದೊಡನೆ ಅವರ ಕಾಲಿಗೆ ಬಿದ್ದು ನಮಸ್ಕರಿಸಿದಳು ಜನನಿ..

ಚೆನ್ನಾಗಿರಮ್ಮ ನೂರು ಕಾಲ...ಎನ್ನುತ್ತಾ
ಯಾರೋ ಸೀನ ಈ ಹುಡುಗಿ?

ಅಜ್ಜಿ ಇವರು ನಾನ್ ಹಣ ತಗೊಂಡಿದ್ದೀನಲ್ಲ
ಅದೇ ಬಡ್ಡಿ ರಂಗಾ ಅಂತ ಅವರ ಒಬ್ಬಳೇ ಮಗಳು...

ಓಹ್ ಹೌದಾ ಎಂದು ನಡುಗುವ ದನಿಯಲ್ಲಿ ಕೇಳಿದರು.
ಸರಿ ಕಣೋ ಮನೆಗೆ ಬಂದ ಮಗಿಗೆ ಏನಾದರೂ ಮಾಡಿಕೊಡೋ

ಸರಿ ಇರು.
ಎಂದು ಒಳಹೋಗಿ ಟೀ ಮಾಡಿಕೊಂಡು ಬಂದು ಕೊಟ್ಟಾ...

ಏನ್ರೀ ನಿಮಗೆ ಟೀ ಮಾಡಕ್ಕೆ ಬರುತ್ತಾ

ಅಯ್ಯೋ ಅದೆಲ್ಲಾ ಏನ್ರೀ ದೊಡ್ಡ ವಿಷ್ಯ ಬಿರಿಯಾನಿ ಬೇಕಾ ಹೇಳಿ?

ಇನ್ನೊಂದು ದಿನ ಬಂದು ಮಾಡಿಸಿಕೊಂಡು ತಿನ್ನುವೆ,

ಬನ್ನಿ ನಿಮ್ ಕರ್ಮ...

ಏನು?

ಅಲ್ಲ ಬನ್ನಿ ಮಾಡಿಕೊಡೋದು ನನ್ನ ಧರ್ಮ ಅನ್ನೋಕ್ಕೆ ಬಂದೆ..

ಇರಲಿ ಇರಲಿ ಅಜ್ಜಿ ಮುಂದೆ ಬಾಲಬಿಚ್ಚಬೇಡಿ..

ಸರಿ ಬನ್ನಿ ಹೋಗೋಣ...

ಹೇಯ್ ಇರ್ಲಿ ಬುಡ್ಲ ಯಾಕ್ ಅವಸರ ಮಾಡಿಯೇ..
ಇನ್ನೂ ಸ್ವಲ್ಪ ಹೊತ್ತು ಇರ್ಲಿ..

ಎಷ್ಟೇ ಹೊತ್ತು ಇದ್ದರೂ ಅವರ ಮನೆಗೆ ಅವರು ಹೋಗಲೇ ಬೇಕು..

ಸರಿ ಅಜ್ಜಿ ನಾನ್ ಹೋಗಿ ಬರ್ತೀನಿ..

ಆಗಾಗ ಬರ್ತಾ ಇರಮ್ಮಾ

ಖಂಡಿತ ಅಜ್ಜಿ...


ಹಾಗೆಯೇ ಅವರ ಒಡನಾಟ ಮುಂದುವರಿಯಿತು,
ಅವನ ನೇರ ನುಡಿ. ನಿಸ್ವಾರ್ಥ ಸ್ವಭಾವ,
ಯಾರಿಗೂ ಮೋಸ ಮಾಡಬಾರದು ಅನ್ನೋ ಮನಸು ಅವಳಿಗೆ ಹಿಡಿಸಿತು,
ಅದುವೇ ಸ್ನೇಹ ಮುಂದುವರೆಯಲು ಕಾರಣವಾಯಿತು.
ಕಾಲಗಳು ಉರುಳಿತು,
ತಿಂಗಳು ವರ್ಷವಾಯಿತು ಸೀನ ಮಾಡಿದ್ದ ಸಾಲ
ಬಡ್ಡಿಯೊಂದಿಗೆ ತೀರಿಸಿದ ,
ಕೊನೆಯದಾಗಿ ಅವನಿಗೂ ತನಗೂ ಇದ್ದ ಒಂದು ನಂಟು ಈ ಸಾಲ ಮುಗಿಯುತ್ತಾ ಇದ್ದ ಹಾಗೆ ಮುಗಿಯಿತಾ? ಎಂದು ಯೋಚಿಸ ತೊಡಗಿದಳು....
ಜನನಿಯ ಮನದಲ್ಲಿ ಏನೋ ಒಂದು ಹೊಸ ರೀತಿಯ ಭಾವನೆ,
ಸೀನನನ್ನು ಭೇಟಿಯಾಗುವುದು. ಕರೆ ಮಾಡಿ ಮಾತನಾಡುವುದನ್ನು ನಿಲ್ಲಿಸಿದಳು , ಆತನ ಮೇಲಿರುವುದು ಬರಿಯ ಆಕರ್ಷಣೆಯೇ ಅಥವಾ ನಿಜವಾಗಿಯೂ ಪ್ರೀತಿಯೇ
ಎಂದು ತನ್ನನ್ನು ತಾನೇ ಪರೀಕ್ಷೆಗೆ ಒಳ ಪಡಿಸಿದಳು..
ಆರು ತಿಂಗಳಾದರೂ ಅವನ ಮೇಲಿದ್ದ ಆ ಪ್ರೀತಿ ಹಾಗೆಯೇ ಇತ್ತು
ಎಲ್ಲಿಯೂ ಸಹ ಅವನನ್ನು ಮರೆಯಲಾಗಲಿಲ್ಲ..
ಮಳೆ ನಿಂತರೂ ನಿಲ್ಲದ ಮಳೆಯ ಹನಿಯ ಹಾಗೆ ಅವನಿಲ್ಲದಿದ್ದರೂ ಅವನ ಮಾತುಗಳು ಒಡನಾಟ ಅವಳನ್ನು ನೆರಳಿನಂತೆ ಹಿಂಬಾಲಿಸುತ್ತಿತ್ತು,
ಕೊನೆಗೆ ತನ್ನ ಪ್ರೀತಿಯನ್ನು ಆತನಿಗೆ ಹೇಳಬೇಕು ಎಂದು ನಿರ್ಧರಿಸಿಯೇ ಬಿಟ್ಟಳು...
ಮಾರನೆ ದಿನವೇ ಅರ್ಧ ದಿನ ಕಾಲೇಜಿಗೆ ರಜೆ ಹಾಕಿ
ಮಧ್ಯಾಹ್ನ ಸೀನನಿಗೆ ಕರೆ ಮಾಡಿ ಬರ ಹೇಳಿದಳು...

ಕ್ಷಣ ಮಾತ್ರದಲ್ಲಿ ಸೀನನ ಗಾಡಿ ಬಂದು ನಿಂತಿತು..
ಅವನಲ್ಲಿಯೂ ಅವಳನ್ನು ಕಾಣುವ ಕಾತುರ ಮನೆ ಮಾಡಿತ್ತು ಎನ್ನುವುದನ್ನೂ ಅವನ ಮುಖವೇ ತೋರಿಸಿಕೊಡುತ್ತಿತ್ತು,

ಏನ್ರೀ  ಎಷ್ಟೋ ದಿನ ಆಯಿತು ನಿಮ್ನ ನೋಡಿ?
ಮತ್ತೆ ಗಾಡಿ ಕೈ ಕೊಡ್ತಾ?

ಕೈ ಕೊಟ್ಟಿದ್ದು ಗಾಡಿಯಲ್ಲ ಮನಸ್ಸು ಎಂದು ಹೇಳಲಾಗದೆ,
ಹಾಗೇನು ಇಲ್ಲಾರೀ ಬನ್ನಿ ಇಲ್ಲೊಂದು ಪಾರ್ಕ್ ಇದೆ ಕೂತು ಮಾತಾಡೋಣ ಎಂದು ಕರೆದಳು.

ಪಾರ್ಕ್ ಗಾ ಸರಿ ಬನ್ನಿ ಎಂದು ಸೀನನೂ ಆಟೋವನ್ನು ಸೈಡ್ ನಲ್ಲಿ ನಿಲ್ಲಿಸಿ ಅವಳ ಜೊತೆ ಹೋದ...


ಒಂದು ಮರದಡಿ ಇಬ್ಬರೂ ಕುಳಿತರು,
ಹತ್ತು ನಿಮಿಷ ಕಳೆದರೂ ಇಬ್ಬರೂ ಮೌನವಾಗಿಯೇ ಇದ್ದಾಗ
ಸೀನನೆ ಮಾತಾರಂಬಿಸಿದ,

ಏನ್ರೀ ಇದೇನು ಬೋಧಿ ಮರಾನ ಬುದ್ಧನ ಹಾಗೆ ಸುಮ್ನೆ ಕೂತು ಬಿಟ್ರಿ,,

ಆಸೆಯನ್ನೇ ತೊರೆದ ಬುದ್ಧನಂತವರು ಹಾಗೆ 
ಮನದೊಳಗೆ ನಾನಾ ಆಸೆಗಳನ್ನು ತುಂಬಿಸಿಕೊಂಡವರು ಸಹ ಮೌನವಾಗಿಯೇ ಇರುತ್ತಾರೆ,

ಓಹ್ ನಿಮ್ಮದು ಈಗ ಯಾವ ಮನಸ್ಸು?

ಆಸೆಯ ಅಲೆಗಳು ಮನದ ದಡಕ್ಕೆ ಬಡಿಯುತ್ತಿವೆ..

ಸರಿ ಏನ್ ಆಸೆ ಅಂತಾದರೂ ಹೇಳಿ,

ಇಲ್ಲಿಯವರೆಗೂ ನಾನು ಯಾವುದೇ ವಸ್ತು ಮೇಲೂ ಆಸೆ ಪಟ್ಟವಳಲ್ಲ,
ನನಗೆ ಇಷ್ಟ ಎಂದು ತಿಳಿದಕೂಡಲೇ ಅಪ್ಪಾನೆ ತಂದು ಕೊಟ್ಟು ಬಿಡೋರು..
ಈಗ ಒಂದು ವಿಷಯದ ಮೇಲೆ ಆಸೆ ಆಗಿದೆ ಬಟ್
ಅದು ನಾನೇ ಪಡೆದುಕೊಳ್ಳುವಂತದ್ದು..

ಸರಿ ಹೇಳಿ ಏನ್ ಆಸೆ ನನ್ನಿಂದಾದ ಸಹಾಯ ಮಾಡ್ತೀನಿ ನೀವ್ ಪಡೆಯಕ್ಕೆ?

ಆ ಆಸೆ ನೀವೇ! ಅಂದ್ರೆ ನಾನ್ ನಿಮ್ನ ಪ್ರೀತಿಸುತ್ತಾ ಇದ್ದೀನಿ

ಅಚ್ಚರಿಯಲ್ಲಿ ಒಂದು ಕ್ಷಣ ಅವನಿಗೆ ಆ ಮಾತುಗಳನ್ನೇ ನಂಬಲು ಆಗಲಿಲ್ಲ!
ಅವನಿಗೆ ಅವಳೆಂದರೆ ಇಷ್ಟವೇ ಆದರೆ
ಅವನೆಂದೂ ಜಾತಿಯಲ್ಲಿ ಹಣದಲ್ಲಿ ಅವರಿಗೆ ಸಮನಲ್ಲ ಎನ್ನುವ ಕೀಳರಿಮೆ ಅವನನ್ನು ಪ್ರೀತಿಯ ಬಲೆಗೆ ಸಿಲುಕದಂತೆ ಮಾಡಿತ್ತು
ಆದರೆ ಇಂದು ಜನನಿಯೇ ತನನ್ನು ಪ್ರೀತಿಸಿವುದಾಗಿ ಹೇಳಿದಾಗ ಅವನಿಗೆ ಜಗವೇ ನಿಂತ ಅನುಭವ....
ಏನೂ ಹೇಳದೆ ಹಾಗೆ ಕಂಬದಂತೆ ನಿಂತು ಬಿಟ್ಟ.....

ಏನ್ ಸುಮ್ನೆ ನಿಂತು ಬಿಟ್ರಿ ನಾನ್ ಅಂದ್ರೆ....  ನಿಮಗೆ ಇಷ್ಟ ಇಲ್ವಾ?

ನೀವ್ ಅಂದ್ರೆ ನನಗೆ ಇಷ್ಟವೇ ನನ್ನ ಬದುಕಿನಲ್ಲಿ ನಾನು ತುಂಬಾ ಸಲಿಗೆ ಇಂದ ಸ್ನೇಹಿತೆಯ ಹಾಗೆ ಮಾತಾಡಿದ ಮೊದಲ ಹೆಣ್ಣು ನೀವು,, ನೀವ್ ನನ್ನ ಜೊತೆ ಇದ್ದ ಒಂದೊಂದು ಕ್ಷಣವೂ ನನಗೆ ಯಾವ ವೇದನೆ ನೋವು ಕಷ್ಟವೂ ನೆನಪಾಗ್ತಾ ಇರ್ಲಿಲ್ಲ..
ನೀವು ಸಿಗದೇ ಇದ್ದಾಗ ನಿಮ್ಮ ಮನೆಯ/ಕಾಲೇಜ್ ಮುಂದೆ ಹಾದು ಹೋಗ್ತಾ ಇದ್ದೆ ನೀವು ಕಾಂತೀರೆನೋ ಅಂತ,
ಈಗ ನೀವೇ ನನ್ನ ಪ್ರೀತಿಸೋದು ಹೇಳಿದಾಗ
ನನಗೆ ಖುಷಿ ಪಡಬೇಕೋ ದುಃಖ ಪಡಬೇಕೋ ತಿಳಿಯುತ್ತಿಲ್ಲ.

ನೀವೂ ನನ್ನ ಪ್ರೀತಿಸಲ್ವ?

ನನಗೆ ಎರಡು ತಿಂಗಳು ಟೈಮ್ ಬೇಕು ಯೋಚಿಸಕ್ಕೆ?

ನಿಮ್ಮ ಮನಸಿನಲ್ಲಿ ನಾನ್ ಇದಿದ್ರೆ ಈಗಲೇ ಹೇಳ್ತಾ ಇದ್ರಿ
ಇಲ್ಲ ಅದಕ್ಕೆ ಸಮಯ ಕೇಳ್ತಾ ಇದ್ದೀರಾ?

ನೋಡಿ ಅಂಗಡಿಯಲಿರೋ ಬಂಗಾರನ ನೋಡಿದ ಕೂಡಲೇ ಇಷ್ಟ ಪಡಬಹುದು,
ಆದರೆ ಅದನ್ನು ಖರೀದಿಸಕ್ಕೆ ಶಕ್ತಿ ಇದೆಯಾ?
ಅಥವಾ ಕಳ್ಳತನ ಮಾಡಕ್ಕೆ ಯುಕ್ತಿ ಇದೆಯಾ ಅಂತ ನೋಡಬೇಕಾಗುತ್ತೆ,
ಅವಸರದಿಂದ ನಿರ್ಧರಿಸುವ ಯಾವ ಕೆಲಸವೂ ಪರಿಪೂರ್ಣ ಆಗಲ್ಲಾ,
ಹಾಗಾಗಿ ನನಗೆ ಸಮಯ ಬೇಕು,
ನೀವು ನಿರಾಳವಾಗಿ ಮನೆಗೆ ಹೋಗಿ,
ಸರಿ ಬನ್ನಿ ನಾನೇ ಬಿಟ್ಟು ಹೋಗ್ತೀನಿ ಎಂದು
ಅವಳನ್ನು ಕರೆದುಕೊಂಡು ಹೋಗಿ ಮನೆಗೆ ಬಿಟ್ಟು
ತನ್ನ ಮನೆಗೆ ಹೋದ ಸೀನಾ.

ಎಲ್ಲವನ್ನೂ ಯೋಚಿಸಿ.. ಒಂದು ತಿಂಗಳಲ್ಲಿ
ಜನನಿಯ ಮುಂದೆ ಬಂದ..

ನಾನು ಸಂಪೂರ್ಣವಾಗಿ ಯೋಚಿಸಿಯೇ ಒಂದು ನಿರ್ಧಾರಕ್ಕೆ ಬಂದೆ,
ನಾನು ನಿಮ್ಮನ್ನ ಪ್ರೀತಿಸ್ತೀನಿ...

ಆ ಮಾತುಗಳನ್ನು ಕೇಳುತ್ತಿದ್ದ ಹಾಗೆ ಸ್ವರ್ಗವೇ ಸಿಕ್ಕಷ್ಟು ಖುಷಿಯಲ್ಲಿ ಅವಳ ಆಸೆಗಳಿಗೆ ರೆಕ್ಕೆ ಮೂಡಿ ಹಾರಿತು.

ಪ್ರೀತಿಸುವ ಅರ್ಹತೆ ಎಲ್ಲರಿಗೂ ಇರುತ್ತೆ ಆದರೆ
ಪ್ರೀತಿಸಿದವರನ್ನೇ ಪಡೆಯಲು ಅರ್ಹತೆ ಬೇಕೇ ಬೇಕು?
ಆ ಅರ್ಹತೆ ನನಗೆ ಇದೆಯಾ ಅಂತಾನೆ ನಾನ್ ಯೋಚಿಸಿದ್ದು,
ನಿಮ್ಮನ್ನ ಸಾಕುವ ಶಕ್ತಿ ನನಗಿದೆ
ಗುಡಿಸಲೇ ಆದರೂ ಅದನ್ನ ಗುಡಿಯಂತೆ ನೆನೆದು ನಿಮ್ನ ನೋಡಿಕೊಳ್ತೀನಿ,
ನಮಗೆ ನಿಮ್ಮ ತಂದೆಯ ಹಣ ಬೇಡ ನಮ್ಮದೇ ಸಾಕು...



ಪರವಾಗಿಲ್ಲ ನಾನ್ ನಿಮ್ನ ಏನೋ ಅನ್ಕೊಂಡಿದ್ದೆ
ನೀವು ಎಲ್ಲಾ ರೀತಿಯಲ್ಲೂ ಯೋಚಿಸಿದ್ದೀರಾ ವೆರಿ ಗುಡ್...

ಪ್ರೀತಿ ಮಾಡೋದು ದೊಡ್ಡದಲ್ಲ
ಮುಂದೆ ಬರುವ ಸುನಾಮಿಯನ್ನ ಎದುರಿಸುವ ಶಕ್ತಿ ಇರಬೇಕು
ಅದನ್ನ ನಮ್ಮ ಪ್ರೀತಿಯೇ ಕೊಡಬೇಕು...

ಜಗತ್ತನ್ನೇ ಎದುರಿಸಿ ಎರಡು ಮನಸಿ ಒಂದಾಗುತ್ತೆ
ಆದರೆ ಜಗವೇ ನಿಂತು ಒಲ್ಲದ ಮದುವೆ ಮಾಡಿದ್ರೆ
ಯಾವ ಮನಸು ಒಂದಾಗಲ್ಲ...

ನೀವ್ ಹೇಳೋದು ಸರಿನೆ...

ಏನ್ ಈಗಲೂ ಹೋಗಿ ಬನ್ನಿ ಅನ್ಕೊಂಡು
ನೀನು ಅಂತಲೇ ಹೇಳಿ,

ಸಡನ್ ಆಗಿ ನನಗೆ ಬರಲ್ಲ, ನೀವೇ ಶುರು ಮಾಡಿ,

ಆಯಿತು ಕಣೋ ಸೀನಾ...

ನನಗೆ ಕಣೆ ಅನ್ನೋದಕ್ಕೆ ಕಷ್ಟ ಆಗುತ್ತೆ ಮುಂದೆ ನೋಡೋಣ
ಕರೆಯುವ ಹಾಗೆ ಆದ್ರೆ ಕರೆಯುವ ಇಲ್ಲಾಂದ್ರೆ ಹೋಗಿ ಬನ್ನಿ ಹೋಗು ಬಾ ಅನ್ನುವೆ,,

ಸರಿ ನಾನ್ ಬಲವಂತ ಮಾಡಲ್ಲ...
ನಿಮ್ಮಿಷ್ಟವೆ ನನ್ನದು..

ಅಂದಿನಿಂದ ಅವರ ಬದುಕಿನಲಿ ಪ್ರೇಮದ ಸೂರ್ಯೋದಯ...
ಆ ಬೆಳಕಿನಲ್ಲಿ ಅವರಿಬ್ಬರೂ ನೆಮ್ಮದಿಯಾಗಿದ್ದರು,

ಅದೊಂದು ದಿನ ಪಾರ್ಕಿನ ಕಲ್ಲುಬೆಂಚಿನ ಮೇಲೆ ಕುಳಿತ
ಜೋಡಿ ಹಕ್ಕಿಗಳು.....

ಅಲ್ಲಾ ಜನನಿ ನಿನಗೆ ಹೋಲಿಸಿದ್ರೆ ಹಣದಲ್ಲಿ ಅಂತಸಿನಲ್ಲಿ
ಓದಿನಲ್ಲಿ ಯಾವುದರಲ್ಲೂ ನಾನು ಸಮನಲ್ಲ,
ನಿನ್ನ ತಂದೆ ನಿನಗೆ ಒಳ್ಳೆಯ ಓದಿರೋ ಹಣವಂತ ಹುಡುಗನ್ನ ನೋಡಿ ಮದ್ವೆ ಮಾಡಿರೋರು ? ನಿನ್ ಯಾಕೆ
ಹೋಗಿ ಹೋಗಿ ನನ್ನ ಆಯ್ಕೆ ಮಾಡಿಕೊಂಡೆ ?

ನೀನ್ ಹೇಳೋ ಹಾಗೆ ಓದಿರೋ ಹಣವಂತ ಹುಡುಗನ್ನ ಮದುವೆ ಮಾಡೋದು ಯಾಕೆ ?

ನೆಮ್ಮದಿಯಾಗಿರಕ್ಕೆ....

ನನಗೆ ಆ ನೆಮ್ಮದಿ ನಿನ್ನ ಜೊತೆ ಇದ್ರೇನೆ ಸಿಗೋದು
ಹಾಗಾಗಿ ನನ್ನ ಆಯ್ಕೆ ಸರಿ ಅಲ್ವ ? ಎಲೆ ತುಂಬಾ ವಿವಿಧ ತಿಂಡಿಗಳು ಇದ್ರೇನು, ಹೊಟ್ಟೆ ಹಸಿವಿಲ್ಲಾಂದ್ರೆ,
ಹಾಗೆ ಎಷ್ಟೇ ಹಣ ಓದು ಇದ್ರೇನೆ ನೆಮ್ಮದಿ ಇಲ್ಲಾಂದ್ರೆ...
ಓದು ನನ್ನ ಹತ್ರ ಇದೆ ಹಣ ನಮಗೆ ಒಳ್ಳೆಯ ರೀತಿಯಲ್ಲಿ ದುಡಿಯೋದು ಗೊತ್ತಿದೆ
ಇನೇನ್ ಬೇಕು....

ನೀನ್ ಹೇಳೋದು ಸರಿನೆ, ಆದರೆ ಹುಡುಗೀರು ಹಣವನ್ನೇ ಆಸೆ ಪಡೋದು ಏನೋ ಆ ಕ್ಷಣದ ಭಾವನೆಗೆ ಬೆಲೆ ಕೊಟ್ಟರೂ ಮುಂದೆ ಹಣ ಇಲ್ಲದಿದ್ದರೆ ಅವರ ಮನಸು ಚೇಂಜ್ ಆಗುತ್ತೆ
ಹಣ ಇದ್ರೇನೆ ಹುಡುಗೀರು ಲವ್ ಮಾಡೋದು ಅಂತ ನನ್ನ ಫ್ರೆಂಡ್ಸ್ ಹೇಳ್ತಾರಲ್ಲ?

ಯಾರೋ ಅದು ನನ್ನ ಎದುರಿಗೆ ಕರ್ಕೊಂಡ್ ಬಾ ನನ್ನ ಮುಂದೆ ಹೇಳಲಿ , ಅವರ ಅನ್ನಿಸಿಕೆನೆ ತಪ್ಪು, ಹಣ ಇದ್ರೇನೆ ಬೀಳೋದು ಅಂದ್ರೆ ಖಂಡಿತ ಅದು ಹಳ್ಳಾನೆ ಆಗಿರುತ್ತೆ, ಪ್ರೀತಿಯ ಆಳಕ್ಕೆ ಅಲ್ಲ
ಹುಡುಗಿ/ಗ ಯಾರೇ ಅಗಲಿ ಅವರು ಇಷ್ಟ ಪಡೋದು comfort zone ಅಷ್ಟೇ.

comfort zone? ಅಂದ್ರೇನು?

comfort zone ಅಂದ್ರೆ ಹಿತಕರವಾದ ವಾತಾವರಣ, ಒಬ್ಬರ ಜೊತೆ ಮಾತಾಡ್ತಾ ಇದ್ದಾಗ ನಾವು ಹೊರಡುವ ಸಮಯ ಬಂದಾಗಲೂ ಇನ್ನೊಂದು ಹತ್ತು ನಿಮಿಷ ಅಂತ ಹೇಳ್ಕೊಂಡೇ ಅರ್ಧ ಗಂಟೆ ಅದಮೇಲೆ ಒಲ್ಲದ ಮನಸ್ವಿನಲ್ಲಿ ಹೊರಡುತ್ತೇವೆ ನೋಡು ಅದು, ಹಣ ಆಸ್ತಿ ರಕ್ತ ಸಂಬಂಧಗಳು ಎಲ್ಲವನ್ನೂ ಮರೆತು ಅವರ ಜೊತೆ ಇರುತ್ತೇವೆ, ಅದಕ್ಕೆ ಅಲ್ವ ಲವ್ ಮಾಡಿದವರೇ ಬೇಕು ಅಂತ ಅದೆಷ್ಟೇ ಅಸ್ತಿ ಇರಲಿ ಸಂಬಂಧ ಇರಲಿ ಎಲ್ಲವನ್ನೂ ಬಿಟ್ಟು ಉಟ್ಟ ಬಟ್ಟೆಯಲ್ಲಿ ಮನೆ ಬಿಟ್ಟು ಬರೋದು, ಅಂತಹ ಒಂದು ವಾತಾರವಣ ಯಾರಿಂದ ನಿರ್ಮಿಸಕ್ಕೆ ಆಗುತ್ತೋ ಅವರನ್ನ ಮಾತ್ರವೇ ಯಾರೇ ಅಗಲಿ ಹುಡುಗಾನೋ ಹುಡುಗಿನೋ ಇಷ್ಟ ಪಡೋದು.
ಅದಿಲ್ಲದೆ ಒಂದು ಪ್ರೀತಿ ಅಂತ ಇದ್ರೆ ಅದು ಪ್ರೀತಿನೆ ಅಲ್ಲ
ಏನೋ ಒಳ ವ್ಯವಹಾರ ಅಷ್ಟೇ ಅದಕ್ಕೆ ಆಯಸ್ಸು ಕೂಡ ಕಡಿಮೆ,
ಅಂದ ಹಣ ಯೌವನ ಎಲ್ಲವೂ ಒಂದಲ್ಲ ಒಂದು ದಿನ ನಮ್ಮನ್ನ ಬಿಟ್ಟು ಹೋಗುತ್ತೆ.. ಆದ್ರೆ ಸದಾ ನಮ್ಮ ಜೊತೆ ಇರೋದು ಮನಸ್ಸು ಮಾತ್ರವೇ ಅದೊಂದು ಪರಿಶುದ್ಧವಾಗಿದ್ದರೆ ಸಾಕು...

ಅಬ್ಬಾ ಏನ್ ಸೂಪರ್ ಆಗಿ ನನಗೆ ಅರ್ಥವಾಗುವ ಹಾಗೆ ಹೇಳಿದೆ ಜನನಿ... 
ಇದನ್ನ ಪ್ರೇಮೋಪದೇಶ ಅನ್ನಬಹುದು..

ಹಾಗೇನು ಇಲ್ಲ ನನಗೆ ಅನ್ನಿಸಿದ್ದು ಹೇಳಿದೆ.....

ಕಾಲಚಕ್ರ ಎರಡು ವರ್ಷಕ್ಕೆ ಉರುಳಿತು.....

ಅವರು ಸದಾ ಭೇಟಿಯಾಗುವ ಅದೇ ಸ್ಥಳದಲ್ಲಿ ಕುಳಿತು ಜನನಿ ಹೇಳಿದಳು....

 ಸೀನಾ ಈ ಜಗತ್ತಿನೊಂದಿಗೆ ಪ್ರೇಮದ ಮರದ ಹಿಂದೆ ಬಚ್ಚಿಟ್ಟುಕೊಂಡು 
ಕಣ್ಣಾಮುಚ್ಚಾಲೆ ಆಟಕ್ಕೆ ಎರಡು ವರ್ಷ ಆಗಿದೆ..
ನಮ್ಮ ಮನೆಯಲ್ಲಿ ಮೆಲ್ಲಗೆ ನನ್ನ ಮದ್ವೆಯ ಮಾತುಕತೆ ಶುರುವಾಗಿದೆ ಅದು ಗಂಭೀರವಾಗುವ ಮುನ್ನ ನಾವು ಯೋಚಿಸಬೇಕು...
ಮನೆಯವರನ್ನು ಎದುರಿಸಿ ಒಪ್ಪಿಸಿ ಮದುವೆಯೇ?
ಅಥವಾ ಅವರಿಗೆ ಹೆದರಿ ಓಡಿ ಹೋಗಿ ಮದುವೆಯೇ?

ಖಂಡಿತ ನಿಮ್ಮ ತಂದೆಯನ್ನ ಎದುರಿಸಿ ಮದುವೆ ಆಗೋದು ಅನ್ನೋದು ಅಸಾಧ್ಯ ನಮ್ಮ ವಿಷಯ ಗೊತ್ತಾದ ಕೂಡಲೇ ಇಬ್ಬರಲ್ಲಿ ಒಬ್ಬರನ್ನು ಬಂಧಿಸಿ ಬಿಡ್ತಾರೆ,
ಅವರನ್ನ ಎದುರಿಸುವಷ್ಟು ಹಣ,ಜನ ಬಲ ನಮಗಿಲ್ಲ..
ಅವರಿಗೆ ಗೊತ್ತಿಲ್ಲದ ರೌಡಿಗಳಿಲ್ಲ ಅವರು ನೋಡಿರದ ಪೋಲಿಸ್ ಇಲ್ಲ,
ಹಾಗಾಗಿ ನಮ್ಮ ಮುಂದೆ ಇರೋದು ಒಂದೇ ಮಾರ್ಗ ಅದು ಎಲ್ಲಿಯಾದರೂ ಓಡಿ ಹೋಗಿ ಮದುವೆಯಾಗೋದು...
ಅದು ಕೂಡ ಕಷ್ಟವೇ ಅದನ್ನೂ ಸಹ ಬಹಳ ಜೋಪಾನವಾಗಿ ಪ್ಲಾನ್ ಮಾಡಬೇಕು....

ಸೀನ ನಿನಗೆ ನಮ್ಮಪ್ಪನ್ನ ನೋಡಿದ್ರೆ ಭಯಾನ?

ನನಗೆ ನಿನ್ನ ತಂದೆಗಿಂತ ನಿಮ್ಮ ಚಿಕ್ಕಪ್ಪನ್ನ ನೋಡಿದ್ರೆ ಸ್ವಲ್ಪ ಭಯ ಜಾಸ್ತಿ...
ಅವರ ಬಗ್ಗೆ ಎಷ್ಟೋ ಜನರು ಹೇಳಿದನ್ನ ಕೇಳಿದ್ದೀನಿ...
ಅವರು   ಯೋಚನೆ ಮಾಡಲ್ಲ ಬರೀ ಹೊಡಿಬಡಿ ಅಷ್ಟೇ ಅವರ ಮಾತು.... ಒಂದು ಸಲ ಬಡ್ಡಿ ಕೊಡೋದು ಮೂರು ದಿನ ಆಯಿತು ಅಂತ ಆ ಮೂರು ದಿನಕ್ಕೊಂದು ಬಡ್ಡಿ ಹಾಕಿದ್ರು
ಅದು ನನ್ನ ಹತ್ರ ಇರಲಿಲ್ಲ ಬಡ್ಡಿ ಹೊಂದಿಸಿಕೊಂಡು ಬರೋದೆ ಕಷ್ಟ ಆಗಿತ್ತು ಅದರಲ್ಲಿ ಇದನ್ನ ಬೇರೆ ಕೇಳಿದ್ರ ,
ಇಲ್ಲ ಅಣ್ಣಾ ಆಮೇಲೆ ತಂದು ಕೊಡ್ತೀನಿ ಅಂದೇ
ಕೆಳಗೆ ನನ್ನ ಮೊಬೈಲ್ ಕಿತ್ತು ಇಟ್ಕೊಂಡ್ ಹೋಗು ಅಂದ್ರು
ನನಗೆ ಮೊಬೈಲ್ ಬೇಕೇ ಬೇಕಿತ್ತು ಸ್ಕೂಲ್ ಗೆ ಮಕ್ಕಳನ್ನ ಕರ್ಕೊಂಡು ಹೋಗ್ತೀನಿ ಯಾವುದಾದರೂ ಒಂದು ಮಗು ಬರದೆ ಇದ್ದಾಗ ಅವರ ಮನೆಯವರು ಕಾಲ್ ಮಾಡಿ ಹೇಳ್ತಾರೆ ನನಗೆ ಅಷ್ಟು ದೂರ ಹೋಗೋದು ತಪ್ಪುತ್ತೆ,
ಎಷ್ಟೋ ಗೋಗರೆದು ಕೇಳಿದ ಮೇಲಷ್ಟೇ ಕೊಟ್ರು
ಆ ಮೂರು ದಿನದ ಬಡ್ದಿನ ಅವತ್ತೇ ತಂದು ಕೊಟ್ಟೆ,

ನೀನ್ ಹೇಳೋದು ಸರಿ ಅವರ ಸ್ವಭಾವವೇ ಹಾಗೆ
ಅದಕ್ಕೆ ಸಾಲ ಕೇಳಕ್ಕೂ ಅಥವಾ ತಗೊಂಡಿರೋದು ಕೊಡಕ್ಕೂ
ನಾನ್ ಮನೆಯಲ್ಲಿ ಇದ್ದೀನಿ ಅಂತ ನೋಡ್ಕೊಂಡು ಬರ್ತಾರೆ
ನಾನ್ ಇದ್ರೆ ಏನಾದರೂ ಕಡಿಮೆ ಮಾಡ್ತೀನಿ ಅಂತ,
ಆಮೇಲೆ ಇನ್ನೊಂದು ಏನ್ ಅಂದ್ರೆ ಅವರು ಕೊಲೆ ಕೂಡ ಮಾಡಿದ್ದಾರೆ
ನಮ್ಮ ಜಾತಿಯ ಹುಡುಗಿ ಇನ್ನೊಂದು ಕೆಳ ಜಾತಿಯ ಹುಡ್ಗನ್ನ ಲವ್ ಮಾಡಿ ಕರ್ಕೊಂಡು ಹೋಗಿ ಬಿಟ್ಲು,
ಆ ಹುಡುಗಿಯ ಹೆತ್ತವರು ನಮ್ಮ ಅಪ್ಪನ್ನ ಭೇಟಿಯಾಗಿ
ಎಷ್ಟು ಹಣ ಬೇಕಿದ್ರೂ ಕೊಡ್ತೀವಿ ನಮ್ಮ ಮಗಳನ್ನ ನಮಗೆ ಹುಡುಕಿ ಆ ಹುಡುಗನಿಂದ ಬಿಡಿಸಿ ಕೊಡಿ ಅಂತ ಕೇಳಿದಕ್ಕಾಗಿ ಹಣ ತಗೊಂಡು,
ಅವಳನ್ನು ಹುಡುಕೀ ಆ ಹುಡುಗನ್ನ ಕೊಂದು ಕರ್ಕೊಂಡು ಬಂದ್ರು,
ಆ ಕೇಸ್ ಮೇಲೆ ಅವರು ಜೈಲ್ ಗೆ ಕೂಡ ಹೋಗಿದ್ರೂ
ಆ ಕೇಸ್ ವಾಪಾಸ್ ತಗೊಳಲಿಲ್ಲಾಂದ್ರೆ ನಿಮ್ಮನ್ನ ನಾವ್ ನೆಮ್ಮದಿಯಾಗ್ ಇರಕ್ಕೆ ಬಿಡಲ್ಲ ಅಂತ ಹೆದರಿಸಿ ಆ ಕೇಸ್ ವಾಪಾಸ್ ತಗೊಳೋ ಹಾಗೆ ನಮ್ಮ ಅಪ್ಪಾನೆ ಮಾಡಿದ್ದು
ಅದೆಲ್ಲಾ ಆಗಿ ಆ ಮನೆಯವರು ಈ ಊರನ್ನೇ ಬಿಟ್ಟು ಹೋದ್ರು,

ಅಬ್ಭಾ ನನಗೆ ತಂದೆ ತಾಯಿ ಅಣ್ಣ ತಂಗಿ ಇಲ್ದೆ ಇರೋದೇ ಒಳ್ಳೆಯದಾಯಿತು,

ಆದರೆ ನಿಮ್ಮಜ್ಜಿ ಇದ್ದಾರಲ್ಲ ಅವರನ್ನ ಏನ್ ಮಾಡ್ತಾರೋ ಅಂತಾನೆ ಭಯ ಸೀನ ಒಂದು ವೇಳೆ ನಾವು ಓಡಿ ಹೋದ್ರೆ?

ಭಯ ಬೇಡ ಅಜ್ಜಿನಾ ಏನೂ ಮಾಡಲ್ಲ
ಅವರು ಮುಟ್ಟಿದ್ರೆನೆ ಸಾಯೋ ಹಾಗೆ ಇದ್ದಾರೆ ಹಾಗಾಗಿ ಅವರ ಮೇಲೆ ಕೈ ಇಡಲ್ಲ ಆದರೆ ನನ್ನ ಮೇಲೆ ಮಾತ್ರ ಬೇಜಾನ್ ಅಕ್ರೋಶ ಇರುತ್ತೆ ಸಿಕ್ಕಿ ಬಿದ್ದೆ ಅನ್ಕೋ,
ರೇಶನ್ ಕಾರ್ಡ್ ನಲ್ಲಿ ಹೆಸರು ಇದ್ದಿದ್ದಕ್ಕೆ ಯಾವ ಸಾಕ್ಷಿಯೂ ಇರದ ಹಾಗೆ ಮಾಡಿ ಬಿಡ್ತಾರೆ...

ಹೌದು ನನ್ನಿಂದ ನಿನ್ನ ಪ್ರಾಣಕ್ಕೆ ಒಂದು ಅಂದ್ರೆ ಖಂಡಿತ ನಾನ್ ಜೀವಂತ ಇರಲ್ಲ.. 
ಎನ್ನುತ್ತಾ ಅವನ ಕೈ ಹಿಡಿದಳು...

ಹೇಯ್ ನಾವಿಬ್ಬರೂ ಒಂದೇ ಜೀವ ಜನನಿ..
ಒಬ್ಬರನ್ನ ಬಿಟ್ಟು ಇನ್ನೊಬ್ಬರು ಹೋಗೋ ಮಾತೆ ಇಲ್ಲಾ.
ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇವೆ ಅನ್ನೋದಕ್ಕೆ ಪ್ರಾಣವನ್ನೇ ಹೊತ್ತೆ ಇಡಬೇಕು ಅಂತ ಬಂದಾಗ ಇಡ್ತೀವಿ ನೋಡು ಅದೇ ನಮ್ಮ ಪರಿಶುದ್ಧವಾದ ಪ್ರೀತಿಗೆ ಸಾಕ್ಷಿ...

ಮುಂದಿನ ವಾರ ನಾನು ಮನೆ ಬಿಟ್ಟು ಬರ್ತೀನಿ ಎಲ್ಲಿಯಾದರೂ ಹೋಗಿ ಮದುವೆ ಆಗೋಣ...

ಸರಿ ಜನನಿ ಎಲ್ಲದಕ್ಕೂ ಸಿದ್ಧತೆ ಮಾಡಿಕೊ
ಸಾಧ್ಯವಾದರೆ ಇಲ್ಲಿಂದ ನಾಲಕ್ಕು ದಿನ ಆದ್ಮೇಲೆ ಬರುವ  ಭಾನುವಾರ ಸಿಕ್ಕಿ ಮತ್ತಷ್ಟು ಇದರ ಬಗ್ಗೆ ಮಾತಾಡೋಣ,
ಪರಿಪೂರ್ಣ ಆಲೋಚನೆ ಇಲ್ಲದೆ ಮಾಡುವ ಕೆಲಸವಲ್ಲ ಇದು
ಆಮೇಲೆ ನಮ್ಮ ಇಬ್ಬರ ಜೀವಕ್ಕೂ ಅಪಾಯ ಕಟ್ಟಿಟ್ಟಬುಟ್ಟಿ ಆಗುತ್ತೆ,

ಸರಿ ಸೀನ ನಾನ್ ಹೋಗ್ ಬರ್ತೀನಿ...
ಹೋಗಿ ಬಾ...

ಆ ಭಾನುವಾರ ಮತ್ತೊಮ್ಮೆ ಇಬ್ಬರೂ ಭೇಟಿಯಾದರು.

ಅಲ್ಲಾ ಜನನಿ ನಿಮ್ಮ ತಂದೆಗೆ ಮನೆ ರಿಜಿಸ್ಟರ್ ಆಫೀಸ್ ನಲ್ಲಿ ಮಾತ್ರವೇ ಜನರಿದ್ದಾರೆ ಅನ್ಕೊಂಡ್ ಇದ್ದೆ,
ಈಗ ನೋಡಿದ್ರೆ ಮದುವೆ ರಿಜಿಸ್ಟರ್ ಆಫೀಸ್ ನಲ್ಲೂ ಜನರಿದ್ದಾರೆ ಅಂತ ಈಗಲೇ ತಿಳಿದಿದ್ದು..

ಏನ್ ಹೇಳ್ತಾ ಇದ್ದೀಯ ಸೀನ...

ನಮ್ಮ ಮದುವೆಯನ್ನ ರಿಜಿಸ್ಟರ್ ಮಾಡಿಸಬೇಕಲ್ವ ಅದಕ್ಕೆ ಕೇಳಕ್ಕೆ ಹೋಗಿದ್ದೆ ಸುಮ್ನೆ ಗಂಗಾ ಅವರಿಗೆ ಗೊತ್ತಿರುವ ಹುಡುಗಿ ಅಂತ ಹೇಳಿದಕ್ಕೆ ಎಲ್ಲರೂ ನನ್ನಿಂದ ಆಗಲ್ಲ ಆಗಲ್ಲ ಅಂತ ಹಿಂದೆ ಸರಿದ್ರು,
ಇನ್ನೂ ಗಂಗಾನ ಮಗಳೇ ಅಂತ ಹೇಳಿದ್ರೆ ಅಲ್ಲೇ ನನ್ನ ಹಿಡಿದು ನಿಮ್ಮ ತಂದೆಯ ಕೈಗೆ ಕೊಟ್ಟಿರೋರೋ ಏನೋ...?

ನಾನು ಕೂಡ ಇಷ್ಟು ದಿನ ಇದೆ ಯೋಚನೆ ಮಾಡಿದ್ದು ,
ಇಲ್ಲಿ ಎಲ್ಲಾ ಸರ್ಕಾರೀ ಆಫೀಸ್ ನಲ್ಲೂ ನಮ್ಮಪ್ಪನಿಗೆ ಬೇಕಾದವರು ಇದ್ದಾರೆ,
ನೀನ್ ಯೋಚನೆ ಬಿಡು ಇದಕ್ಕೊಂದು ಪ್ಲಾನ್ ನಾನ್ ಮಾಡಿದ್ದೀನಿ
ಈ ಬುಧವಾರ ನಿಮ್ಮ ಮನೆಯಲ್ಲಿಯೇ ನಿಮ್ಮ ಅಜ್ಜಿ ಮುಂದೆ ನಾವ್ ಮದುವೆ ಆಗೋಣ....

ಸರಿ ಎನ್ನುತಾ ಇಬ್ಬರೂ ಹೊರಟರು,

ಬುಧವಾರ ಕಾಲೇಜಿಗೆ ಹೋಗಿ ಬರುತ್ತೇನೆ ಎಂದೇಳಿ
ಜನನಿ ಮನೆಯ ಬಿಟ್ಟು ಬಂದಳು,

ಹೇಗೋ ಮನ ಧೈರ್ಯದಿಂದ ಮದುವೆಗೆ ಸಿದ್ಧರಾದರು,
ಇಬ್ಬರ ಮೇಲೂ ಪರಿಶುದ್ಧವಾದ ಪ್ರೀತಿ ಇಟ್ಟಿರುವ ಅಜ್ಜಿಯ ಮುಂದೆ ಸೀನ ತಾಳಿ ಕಟ್ಟುತ್ತ ಇದ್ದ ಹಾಗೆ
ಆ ಪ್ರೇಮಿಗಳು ಸತಿಪತಿಗಳಾದರು.
ತನ್ನ ಮೊಬೈಲ್ ನಲ್ಲಿ ನಡೆಯುತ್ತಾ ಇದ್ದ ಮದುವೆಯನ್ನು ಚಿತ್ರಿಸಿಕೊಳ್ಳುತ್ತಿದ್ದ ಸ್ನೇಹಿತೆಗೆ ಜನನಿ,

ರಾಧ ಈ ಫೈಲ್ ನ ನಾನು ನಿನಗೆ ಕೊಟ್ಟಿರುವ ಪೆನ್ ಡ್ರೈವ್ ನಲ್ಲಿ ಹಾಕಿ ಸೇಫ್ ಆಗಿ ಇಟ್ಕೋ ಎಂದು ಹೇಳಿ ಅವಳನ್ನು ಮೈಸೂರಿಗೆ ಕಳುಹಿಸಿದಳು..

ಇಬ್ಬರ ಕಣ್ಣುಗಳಲ್ಲೂ ಕಂಬನಿ ತುಂಬಿ ಕೊಂಡಿತು,

ಮದುವೆ ಅನ್ನೋದು ಜೀವನದಲ್ಲಿ  ಮುಖ್ಯವಾದ ಹಂತ
ಅದನ್ನ ಸ್ನೇಹಿತರು,ಬಂಧುಗಳು ಅಂತ ಎಲ್ಲರ ಮುಂದೆಯೂ ಆಗಬೇಕು ಹಾಗೆ ನಿನ್ನ ತಂದೆಗೆ ನೀನು ಒಬ್ಬಳೇ ಮಗಳು
ಅವರು ನಿನ್ನ ಮದುವೇನ ಅದ್ಧೂರಿಯಾಗಿ ಮಾಡಿರೋರು ,
ಹೀಗೆ ಯಾರೂ ಇಲ್ಲದೆ ಆಯ್ತಲ್ಲ ಅನ್ನೋ ಬೇಜಾರ್ ತಾನೇ ?

ನೋಡು ಸೀನ ಎಷ್ಟೇ ಜನರು ಬರಬಹುದು,
ಎಷ್ಟೇ ಅದ್ದೂರಿಯಾಗಿ ಆಗಬಹುದು,
ಮನಸಿಗೆ ಹಿಡಿಸದ ಮದುವೆಯ ಹಸೆಮಣೆ ಅನ್ನೋದು ಚಟ್ಟ ಆಗುತ್ತೆ , ಅವರೆಲ್ಲಾ ಬಂದು ಹೋಗುವ ಮದುವೆಗಿಂತ ಅವರೆಲ್ಲರೂ ನೀನಾಗಿ ನನ್ನ ಸ್ನೇಹಿತ ಬಂಧುವಾಗಿ ಇರುವ ಈ ಮದುವೆಯೇ ನನಗೆ ಖುಷಿ.
ಈಗ ನಾವ್ ಖುಷಿ ಪಡಕ್ಕೋ ದುಃಖ ಪಡಕ್ಕೋ ಸಮಯ ಇಲ್ಲ
ತಾಳಿ ಕಟ್ಟಕ್ಕೆ ಒಂದು ಗಳಿಗೆ ಸಾಕು ಅದನ್ನು ಉಳಿಸಿಕೊಂಡು ಹೋಗಕ್ಕೆ ಒಂದು ಜನ್ಮ ಬೇಕು.

ಹೌದು ಜನನಿ...
ಇಬ್ಬರೂ ಅಜ್ಜಿಯ ಕಾಲಿಗೆ ಬಿದ್ದರು
ನೂರಾರು ಕಾಲ ಸುಖವಾಗಿ ಬಾಳಿ ಮಕ್ಕಳ ಎನ್ನುವ ಅಜ್ಜಿಯ ಆಶಿರ್ವಾದ ಅವರಿಗೆ ಹೊಸ ಶಕ್ತಿಯನ್ನು ಕೊಟ್ಟಿತು,

ಈಗ ಮುಂದಿನ ಯೋಚನೆ ಏನು ಸೀನ?

ನಾನ್ ಎಲ್ಲಾ ಸಿದ್ದತೆ ಮಾಡ್ಕೊಂಡ್ ಇದ್ದೀನಿ,
ಅಜ್ಜಿ ನಿನ್ನ ಕಣ್ಣಿನ ಅಪರೇಷನ್ ಗೆ ಅಂತ ಇಟ್ಟಿದ್ದ ನಾಲಕ್ಕು ಸಾವಿರ ಎಲ್ಲಿ ?

ಆ ಪೆಟ್ಟಿಗೆಯಲ್ಲಿ ಇದೆ ನೋಡು ಮಗ,

ಹಾ ಸಿಕ್ಕಿತು ನನ್ನ ಜೇಬಿನಲ್ಲಿ ಒಂದು ಸಾವಿರ ಇದೆ
(ಎನ್ನುತ್ತಾ ಐದು ಸಾವಿರ ಜೇಬಿನೊಳಗೆ ಹಾಕಿಕೊಂಡು ,
ಅಜ್ಜಿ ನಿನ್ನ ಒಲೆಗಳನ್ನ ಬಿಚ್ಚು,
(ಅವರು ಕಳಚಿಕೊಟ್ಟಿದ್ದನ್ನು ತಗೊಂಡು ಜೇಬಿಗೆ ಹಾಕೊಂಡ
ಅಜ್ಜಿ ಅಕ್ಕಿ ಎಲ್ಲಿದೆ?
ಇಲ್ಲಿದೆ ನೋಡೋ,

ಒಂದು ವಾರಕ್ಕೆ ಸಾಕು...
ಜನನಿ ಅಲ್ಲಿರೋ ಕವರ್ ತೆಗಿ,

ಸೀನ ಏನ್ ಮಾಡ್ತಾ ಇದ್ದೀಯಾ ?’

ಹೇಳ್ತೀನಿ ತೆಗಿ ಜನನಿ,

ಪಾತ್ರೆಯಲ್ಲಿದ್ದ ಅಕ್ಕಿಯನ್ನು ಕವರ್ ಗೆ ಸುರಿದುಕೊಂಡ,
ಬಳಿಕ ತನ್ನ ಬಳಿ ಇದ್ದ ಐದು ಸಾವಿರ ಹಾಗೂ ಅಜ್ಜಿಯ ಒಲೆಗಳನ್ನು ಅದರೊಳಗೆ ಇಟ್ಟು,
ಅಕ್ಕಿಯನ್ನು ಸುರಿದು,

ಅಜ್ಜಿ ನಾನ್ ಹೇಗೆ ಹೇಳ್ತೀನಿ ಹಾಗೆ ಮಾಡು,
ಜನನಿಯ ಮನೆಯವರು ನನ್ನ ಹುಡ್ಕೊಂಡು ಬರ್ತಾರೆ
ಅವರು ಬಂದು ಕರೆದ ಕೂಡ್ಲೇ ನೀನೆ ಬಾಗಿಲ ಹತ್ರ ಬಂದು ನಿಲ್ಲು,
ಅಕ್ಕಪಕ್ಕದ ಮನೆಯವರು ಹೊರಗೆ ಬರ್ತಾರೆ,
ವಿಷಯ ಎಲ್ಲರಿಗೂ ತಿಳಿದು ಬಿಡುತ್ತೆ ಅಂತ ಅವರು ಕೂಗಡಲ್ಲ,
ನಿನಗೂ ಏನೂ ಮಾಡಲ್ಲ,
ಅವರು ಸೀನ ಎಲ್ಲಿ ಅಂತ ಕೇಳಿದ ಕೂಡಲೇ,
ಅಯ್ಯೋ ಆ ಬೇವರ್ಸಿ ಎಲ್ಲಿ ಹೋಗಿ ಸತ್ನೋ ಗೊತ್ತಿಲ್ಲ ಕಣಪ್ಪ
ಕಣ್ಣ ಅಪ್ರೆಶನ್ ಗೆ ಅಂತ ಇಟ್ಟಿದ್ದ ಹಣದ ಜೊತೆಗೆ ನನ್ನ ಒಲೆಗಳನ್ನು ಕದ್ಕೊಂಡ್ ಹೋಗಿದ್ದಾನೆ,
ಯಾಕ್ ಸ್ವಾಮಿ ಆ ಹಾಳಾದೊನು ನಿಮ್ಮ ಹತ್ರವೂ ಸಾಲ ಮಾಡಿದ್ದಾನ ಅನ್ನು?
ಅವರು ಸುಮ್ನೆ ಆಗಿ ಬಂದ್ರೆ ನಾವ್ ಬಂದಿದ್ದೋ ಅಂತ ಹೇಳಿ ಅಂತಾರೆ,
ಅವರು ಹೋಗುವವರೆಗೂ ಕೊನಗುತ್ತಾ ಇರು,

ಯಾಕೋ ಸೀನ, ಇದರಿಂದ ನಿನ್ನ ಮೇಲೆ ಇನ್ನೂ ಕೆಟ್ಟ ಭಾವನೆ ಬರುತ್ತೆ ಅಲ್ವ ?

ನೋಡು ಅಜ್ಜಿ ಒಂದು ಕೊಲೆ ಮಾಡಿದ್ರೂ ಕೊಲೆಗಾರಾನೆ ಐದು ಕೊಲೆ ಮಾಡಿದ್ರೂ ಕೊಲೆಗಾರಾನೆ,  ಅವರಿಗೆ ನಾನ್ ಒಳ್ಳೆಯವನು ಅಂತ ನಿರೂಪಿಸಿ ಏನೂ ಉಪಯೋಗ ಇಲ್ಲ ಕೆಟ್ಟವನು ಅಂದ್ರೆ ಆದರೂ ನಿನ್ನ ಏನೂ ಮಾಡಲ್ಲ,
ನಂಗೆ ನಿನ್ನ ಜೀವ ಮುಖ್ಯ,

ನನ್ನ ವಿಷಯ ಬಿಡೋ ನಾನ್ ಈಗಲೋ ಆಗಲೋ ಅಂತ ಇದ್ದೀನಿ
ಎಷ್ಟು ದಿನ ಈ ಮುದುಕಿ ಸತ್ರೆ ಯಾರಪ್ಪ ಇದ್ದಾರೆ ಇವನಿಗೆ ಅಂತ ಇದ್ದೆ ಈಗ ನಿನಗೆ ಅಂತ ಒಂದು ಹುಡುಗಿ ಸಿಕ್ಕಿದೆ ಅದೇ ನೆಮ್ಮದಿಯಲ್ಲಿ ಈಗ ಸತ್ತರೂ ನನಗೆ ಖುಷಿಯೇ,

ನೀನ್ ಇನ್ನು ನನ್ನ ಮಗುನ ನೋಡಿ ಆಡಿಸಬೇಕು,
ಈಗ ನಾವ್ ಹೊರಡ್ತೀವಿ ನೀನ್ ಅರೋಗ್ಯ ನೋಡ್ಕೋ ಅಜ್ಜಿ,
ಎನ್ನುತಾ ಮತ್ತೊಮ್ಮೆ ಆಶಿರ್ವಾದ ಪಡೆದು ಇಬ್ಬರೂ ಹೊರಟರು,

ದೂರದಲ್ಲಿರುವ ಸ್ನೇಹಿತನ ರೂಮಿಗೆ ಬಂದ
ಇಬ್ಬರೂ ಒಳಗೆ ಕುಳಿತರು,

ಇದು ನನ್ನ ಫ್ರೆಂಡ್ ರೂಂ ಅವನು ಊರಿಗೆ ಹೋಗಿದ್ದಾನೆ
ಮಾಲೀಕರು ದೂರ ಇದ್ದಾರೆ ಇದೆ ಬೆಸ್ಟ್ ಜಾಗ ಅಂತ ಬಂದೆ,
ಆದರೆ,

ಏನ್ ಆದರೆ?

ಈ ಜಾಗಾನ ಒಂದು ಸಲ ನಿಮ್ಮ ಚಿಕ್ಕಪ್ಪ ನೋಡಿದ್ದಾರೆ
ಆದರೆ ಅದು ನಾಲಕ್ಕು ವರ್ಷಗಳ ಹಿಂದೆ
ನನ್ನ ಫ್ರೆಂಡ್ ಗೆ ಸಾಲ ಕೊಡಿಸಿದ್ದೆ ಆಗ ಅವನಿಂದ ಬಡ್ಡಿ ಬರೋದು ತಡ ಆಯಿತು ಅಂತ  ಇಲ್ಲಿಯವರೆಗೂ ಹುಡ್ಕೊಂಡ್ ಬಂದಿದ್ರು ಆಗ ನನ್ನ ಕೂಡ ಇಲ್ಲಿ ನೋಡಿದ್ದಾರೆ,
ತುಂಬಾ ದಿನಕ್ಕೆ ಈ ಜಾಗ ಸೇಫ್ ಅಲ್ಲಾ...

ಚಿಂತೆ ಬಿಡು ಸಿಗಬೇಕು ಅಂತ ಇದ್ರೆ
ಪಾತಾಳದಲ್ಲಿದ್ದರೂ ಸಿಕ್ಕಿ ಬೀಳ್ತೀವಿ,

ರಂಗ ನ ಮೊಬೈಲ್ ರಿಂಗಣಿಸಿತು,ಎತ್ತಿಕೊಂಡ
ಹಲೋ ಅಣ್ಣ, ಸಮಯ ಏಳು ಗಂಟೆ ಆದ್ರೂ ಪುಟ್ಟಿ ಇನ್ನೂ ಮನೆಗೆ ಬಂದಿಲ್ಲಾ..

ಹೌದ ಎಲ್ಲೋ ಫ್ರೆಂಡ್ ಮನೆಗೆ ಹೋಗಿರಬೇಕು ಫೋನ್ ಮಾಡಿ ಕೇಳಿದ?

ಮೊಬೈಲ್ ಸ್ವಿಚ್ ಆಫ್ ನಲ್ಲಿದೆ!!

ಸರಿ ಇರು ನಾನೇ ಮನೆಗ್ ಬರ್ತೀನಿ....

ಮನೆಯಲ್ಲಿ..
ಅಣ್ಣಾ ಅವಳ ಫ್ರೆಂಡ್ ಮನೆಗೂ ಹೋಗಿ ವಿಚಾರಿಸಿದೆ
ಇವತ್ತು ಅವಳು ಕಾಲೇಜಿಗೂ ಬಂದಿಲ್ಲ ಅಂದ್ರು,

ಇರು
ಎಂದು ಜನನಿಯ ಕೋಣೆಯ ಒಳಗೆ ಗಂಗಾಧರ ಹೋಗಿ
ನೋಡುವಾಗ ಕನ್ನಡಿಯ ಹಿಂದೆ ಇಟ್ಟಿದ್ದ ಚೀಟಿ ಸಿಕ್ಕಿತು,
ತೆಗೆದು ನೋಡಿದ,
ಅಪ್ಪ ನನ್ನ ಕ್ಷಮಿಸು, ನಾನು ಒಂದು ಹುಡುಗನ್ನ ಪ್ರೀತಿಸುತ್ತಾ ಇದ್ದೀನಿ
ಅವನ್ನ ಖಂಡಿತ ನೀನು ಒಪ್ಪಲ್ಲ ಅಂತ ಗೊತ್ತು ಅದಕ್ಕೆ ಮನೆ ಬಿಟ್ಟು ಹೋಗಿ ನಾವು ಮದ್ವೆ ಅಗ್ತಾ ಇದ್ದೀವಿ,.
ನನ್ನ ಕ್ಷಮಿಸಿ ಬಿಡಪ್ಪ....
ರಂಗ ಓದುತ್ತಾ ಇದ್ದ ಹಾಗೆ ಕುಸಿದು ಕುಳಿತ...

ಗಂಗಾ ಗಂಗಾ... ಏನೋ ಇದು
ಊರಲ್ಲಿ ಯಾರೇ ಹುಡುಗ/ಗಿ ಬೇರೆ ಜಾತಿಯವರನ್ನ ಲವ್ ಮಾಡಿ ಮದ್ವೆ ಆಗಕ್ಕೆ ನೋಡುವಾಗ
ನಾವು ಮುಂದೆ ನಿಂತು ತಡೆದಿದ್ದೀವಿ ,
ಎಲ್ಲಾ ಹೆತ್ತವರು ನಮ್ಮ ಬಳಿ ಬರ್ತಾರೆ
ಇವತ್ತು ನನ್ನ ಮನೆಯಲ್ಲಿ ಈ ಅಸಯ್ಯ ನಡಿತಲ್ಲೋ...
ನನ್ನ ಮಾನ ಮರ್ಯಾದೆ ಎಲ್ಲಾ ಹೋಯಿತು ಕಣೋ
ನನ್ನ ನೋಡಿದ್ರೆ ಭಯ ಪಟ್ಟು ಮಾತಾಡೋರು ಇನ್ಮೇಲೆ ನನ್ನ ಮುಂದೇನೆ ಕ್ಯಾಕರಿಸಿ ಉಗಿತಾರಲ್ಲೋ...
ಎಂದು ಗೋಳಾಡುತ್ತಿದ್ದ....

ಅಣ್ಣಾ ಈಗ ಏನ್ ಆಗಿದೆ ಅವರು ಮನೆ ಬಿಟ್ಟು ಹೋಗಿದ್ದಾರೆ ತಾನೇ
ದೇಶಾನೇ ಬಿಟ್ಟು ಏನ್ ಅಲ್ವಲ್ಲ..
ಯಾರಿಗೂ ತಿಳಿಯದ ಹಾಗೆ ಈ ವಿಷಯನ ನಾವೇ ಡೀಲ್ ಮಾಡೋಣ..
ನೀನೆ ಹೀಗೆ ಸೋತು ಕೂತರೆ ನಮ್ಮ ಧೈರ್ಯ ಏನ್ ಆಗೋದು ಹೇಳು?
ನಮ್ಮ ಹುಡುಗಿಯ ಮೇಲೆ ಕಣ್ಣು ಹಾಕಿದವನನ್ನ ಸುಮ್ನೆ ಬಿಡಲ್ಲ ಅಣ್ಣಾ..

ಹಾ ಹೌದು ಹೌದು ಯಾರೋ ಯಾರೋ ಆ ಬೇವರ್ಸಿ?

ಅಣ್ಣಾ .. ಅಣ್ಣಾ...

ಹೇಳೋ.... ಗಂಗಾ ಯಾರೋ ಅದು?

ಅಣ್ಣಾ ಅದೇ ಒಂದೂವರೆ ವರ್ಷದ ಹಿಂದೆ ನಮ್ಮ ಹತ್ರ ಆಟೋ ಅಡಕ್ಕೆ ಇಟ್ಟು ಒಬ್ಬಾ ಹುಡುಗ ಸಾಲ ಮಾಡಿದ್ದ ನೋಡು ?
ಅದೇ ಅವನ ಹೆಸರು ಸಹ ಸೀನಾ ಅಂತ ?
ಅವನೇ ಇರಬೇಕು ಅಣ್ಣಾ ಅವನ ಜೊತೆ ಜನನಿ ಓಡಾಡೋದು ನಮ್ಮ ಹುಡುಗರು ನೋಡಿ ನನಗೆ ಹೇಳಿದ್ರು

ಅಯ್ಯೋ ಆಗಲೇ ಅವನ್ನ ಮುಗಿಸಕ್ಕೆ ಏನೋ ನಿನಗೆ?

ನಾನೇ ಎಲ್ಲೋ ಸುಮ್ನೆ ಬಡ್ಡಿಗೆ ಬರ್ತಾ ಇದ್ನಲ್ಲ ಅಂತ ರೋಡ್ ನಲ್ಲಿ ಸಿಕ್ಕಿ ಮಾತಾಡಿರಬೇಕು ಅಂತ ಸುಮ್ನಾದೆ ಅಣ್ಣಾ...

ಅನ್ನ ಹಾಕಿದ ಮನೆಗೆ ಕನ್ನ ಹಾಕಿ ಬಿಟ್ಟ ಕಣೋ...
ಅವನಿಗೆ ಈ ರಂಗ ಯಾರು ಅಂತ ಗೊತ್ತಾಗಬೇಕು
ಹಾಗೆ ಮಾಡಬೇಕು ಕಣೋ ಗಂಗಾ ಹಾಗೆ ಮಾಡ್ಬೇಕು..
ಎಂದು ಆಕ್ರೋಶದಿಂದ ಉಸಿರಾಡುತ್ತಿದ್ದ...

ಅಣ್ಣಾ ನೀನೆ ಬಿಟ್ಟು ಬಿಡು ಅಂದ್ರೂ ನಾನ್ ಬಿಡಲ್ಲ,
ನನ್ನ ಬಗ್ಗೆ ಕೇಳಿದ್ದು ನೋಡಿದ್ದೂ ಕೂಡ ಈ ಕೆಲಸ ಮಾಡಿದ್ದಾನೆ ಅಂದ್ರೆ
ಅವನ್ನ ಜೀವಂತ ಹೂತಿದ್ರೆನೆ ನನಗೆ ಸಮಾಧಾನ....
ನೀನ್ ಊಟ ಮಾಡಿ ಮಲ್ಕೋ ಅಣ್ಣಾ ನಾನ್ ಈಗಲೇ ಹೋಗ್ತೀನಿ
ಅವಳನ್ನ ಕರ್ಕೊಂಡ್ ಬರ್ತೀನಿ....

ಅಯ್ಯೋ ಎಲ್ಲೋ ಊಟ ಸೇರುತ್ತೆ ಬೆಳಗಾದ್ರೆ ನನ್ನ ಮಾನ ಮರ್ಯಾದೆ ಹೋಗುತ್ತಲ್ಲೋ....
ಎನ್ನುತ್ತಾ ಇದ್ದವನನ್ನು ಕರದುಕೊಂಡು ಹೋಗಿ ರೂಂ ನಲ್ಲಿ ಮಲಗಿಸಿ...

ಹುಡುಕಲು ಹೊರಟ..ಗಂಗಾ...

ರಾತ್ರಿ ಗಾಡಿಯಲ್ಲಿ ಹುಡುಕಿದರೂ ಅವರ ಸುಳಿವೂ ಎಲ್ಲೂ ಸಿಗಲಿಲ್ಲ,
ಮಾರನೆಯ ದಿನ..ಸೀನನ ಮನೆಯ ಮುಂದೆ ಬಂದು ಗಂಗಾ ಕೂಗಿದ..

ಹೊರ ಬಂದು ನೋಡಿದ ಅಜ್ಜಿಗೆ ನಾಲಕ್ಕಾರು ಜನರನ್ನು ನೋಡಿ ಇವರೇ ಇರಬೇಕು ಜನನಿಯ ಕಡೆಯವರು ಅನ್ನಿಸಿತು,
ಅದು ನಿಜಾ ಎನ್ನುವಂತೆ...

ಎಲ್ಲಿ ನಿನ್ನ ಮೊಮ್ಮಗ ಎಂದು ಕೇಳಿದ ಗಂಗಾ...
ಅವರು ಹಾಗೆ ಕೇಳುತ್ತಾ ಇದ್ದ ಹಾಗೆ ಸೀನ ಹೇಳಿಕೊಟ್ಟಂತೆ ಎಲ್ಲವನ್ನೂ ಹೇಳಿತು....

ಅಜ್ಜಿಯ ಮಾತು ಕೇಳಿ ನಿಜವೇನೋ ಎಂದು ಅನ್ನಿಸಿ...
ಸರಿ ನಿನ್ನ ಮೊಮ್ಮಗ ಮನೆ ಹತ್ರ ಬಂದ್ರೆ ಅವನಿಗೆ ಬೇಕಾದವರು ಬಂದಿದ್ರು ಅನ್ನು.... ಅವನಿಗೆ ತಾನಾಗಿಯೇ ತಿಳಿಯುತ್ತೆ

ಆಯಿತು ಸ್ವಾಮಿ.. ಆ ಹಾಳಾದವನು ಏನಾದ್ರೂ ಸಾಲ ಮಾಡಿದ್ದಾನ
ಸಿಕ್ಕರೆ ಬಿಡಬೇಡಿ ಚೆನ್ನಾಗಿ ಹಿಡಿದು ಬಡಿಯಿರಿ...
ಎಂದು ಹೇಳುತ್ತಾ ಇದ್ದ ಹಾಗೆ ಅಲ್ಲಿಂದ ಹೊರಟ....


ಸ್ವಲ್ಪ ದೂರದಲ್ಲೇ ಸ್ನೇಹಿತನ ಮನೆಯಲ್ಲಿ ಬಿಡಾರ ಹೂಡಿದ್ದ ಜೋಡಿಗಳು ಆತಂಕದಲ್ಲೇ ಸಮಯ ಕಳೆಯುತ್ತಿದ್ದವು,

ಇತ್ತ ರಂಗನ ಮನೆಯಲ್ಲಿ..
ಅಣ್ಣಾ ಮೂರು ದಿನದಿಂದ ಎಲ್ಲಾ ಕಡೆ ಹುಡುಕಿಯೂ ಸಿಗಲಿಲ್ಲ ಅಣ್ಣಾ...ಎಂದು ಯೋಚಿಸುತ್ತಾ ಕುಳಿತಿದ್ದ ಗಂಗನಿಗೆ
ಸೀನನ್ನು ಹಿಂದೊಮ್ಮೆ ಅವನ ಗೆಳೆಯನ ರೂಂ ನಲ್ಲಿ ನೋಡಿದ್ದು ನೆನಪಾಯಿತು, ಅಣ್ಣಾ ಒಂದೂವರೆ ವರ್ಷಗಳ ಹಿಂದೆ ಒಂದು ಬಡ್ಡಿ ವ್ಯಾಹಾರದಲ್ಲಿ ಒಬ್ಬನ್ನ ನೋಡಕ್ಕೆ ಅಂತ ಅವನ ರೂಂಗೆ ಹೋಗಿದ್ದೆ ಅಲ್ಲಿ ಸೀನನ ನೋಡಿದ ನೆನಪು..


ಅಲ್ಲೋಗಿ ವಿಚಾರಿಸೋಣ ಅಂತ ಇದ್ದೀನಿ,
ಬಾರೋ ಬಾರೋ ಈಗಲೇ ಹೋಗೋಣ 
ಅಯ್ಯೋ ಅಣ್ಣಾ
ಇಂತಹ ಚೈಲ್ಡ್ ನನ್ನ ಮಕ್ಕಳನ್ನ ನೋಡಕ್ಕೆ ನೀನ್ ಬರೋದ ಬೇಡ ಬೇಡ ..ನಿನ್ ಇಲ್ಲೇ ಇರೋ ಅವನ ಹೆಣ ತರ್ತೀನಿ..

ಬಿಡಬೇಡ ಕಣೋ ಗಂಗಾ...ಬೇಕಿಡ್ರೋ ಇನ್ನೂ ಹುಡುಗರನ್ನ ಕರ್ಕೊಂಡು ಹೋಗು...

ಅಣ್ಣಾ ಆ ನನ್ ಮಗ ನನ್ನ ಒಂದು ಕೈಗೆ ಸಮ ಅಲ್ಲಾ....

ನೋಡು ಗಂಗಾ ನನಗೆ ಮಗಳಿಗಿಂತ ಮಾನ ಮುಖ್ಯ,
ಅವನ್ನ ಕೊಂದೆ ಇವಳನ್ನ ಕರ್ಕೊಂಡು ಬರಬೇಕು ಅಂದ್ರೆ ಹಾಗೆ ಮಾಡು ಇವಳು ಬರಕ್ಕೆ ಒಪ್ಪಲಿಲ್ಲಾಂದ್ರೆ ಅವಳನ್ನೂ ಅಲ್ಲೇ ಕೊಂದು ಹೂತಿಬಿಡು ಇಂತ ಮಗಳು ಇದ್ದರೂ ಒಂದೇ ಸತ್ತರೂ ಒಂದೇ...

ಅಣ್ಣಾ ಅವನಿಗಾಗಿ ನಮ್ಮ ಮಗುನ ಕೊಲ್ಲೋದ ಬೇಡಾ ಅವನಿಗೆ ಇದೆ ಇವತ್ತು ಹಬ್ಬಾ ಎನ್ನುತ್ತಾ ಆಕ್ರೋಶದಿಂದ ಹೊರಟ...
ಇತ್ತ ರೂಮಿನಲ್ಲಿ...
ಏನೋ ಸೀನಾ ಇದು?
ಜನನಿ ಇದು ಮಚ್ಚು ಬೇಕಾಗುತ್ತೆ ಇಬ್ಬರೇ ಬೇರೆ ಇದ್ದೀವಿ ಆಪತ್ತಿಗೆ ಸಹಾಯ ಅಗಲಿ ಅಂತ ತಂದೆ,
ಎನ್ನುತ್ತಾ ಇದ್ದ ಹಾಗೆ ಬಾಗಿಲು ಬಡಿಯುವ ಸದ್ದಾಯಿತು,
ಫ್ರೆಂಡ್ ನ ಬರಕ್ಕೆ ಹೇಳಿದ್ದೆ ಅವನೇ ಇರಬೇಕು
ಇರು ಎಂದು ಮಚ್ಚನ್ನು ಟೇಬಲ್ ಮೇಲಿಟ್ಟು ಬಾಗಿಲು ತೆಗೆಯಲು ಮುಂದಾದ...
ಬಾಗಿಲು ತೆಗೆಯುತ್ತಾ ಇದ್ದ ಹಾಗೆ ಎಗ್ಗರಿಸಿ ಒದ್ದ ಗಂಗಾ..
ಏಟಿನ ರಭಸಕ್ಕೆ ಎಗರಿ ಗೋಡೆಗೆ ಬಡಿದು ಕೆಳಗೆ ಬಿದ್ದ ಸೀನನನ್ನು ಹಿಡಿದೆತ್ತಿ....

ಬೇವರ್ಸಿ ನನ್ನ ಮಗನೆ... ಹಣ ಕೊಟ್ಟ ಮನೆಗೆ ಕಣ್ಣು ಹಾಕೋ ಹಾಲ್ಕ ನನ್ನ ಮಗ ನೀನು....
ಎನ್ನುತ್ತಾ ಅವನ ಕೊರಳನ್ನು ಹಿಡಿದು ದರದರನೆ ಎಳೆದುಕೊಂಡು ಹೋಗಿ ಗೋಡೆಗೆ ಅದುಮಿದ...
ಬಲಿಷ್ಠವಾದ ಗಂಗನ ಎಡಗೈಗೆ ಸಿಕ್ಕಿ ಅವನು ಉಸಿರು ಕಟ್ಟುತ್ತಿತ್ತು... ಕಣ್ಣ ಮಂಜಾಯಿತು ದೃಶ್ಯಗಳು ಸ್ಪಷ್ಟತೆಯನ್ನು ಕಳೆದುಕೊಳ್ಳುತ್ತಾ ಇತ್ತು, ಹಾಗೆ ತನ್ನ ಬಲಗೈಯನ್ನು ಟೇಬಲ್ ಮೇಲೆ ಇಟ್ಟಿದ್ದ ಮಚ್ಚ್ಗಿನ ಕಡೆ ಮೆಲ್ಲನೆ ತೆಗೆದುಕೊಂಡು ಹೋಗುತ್ತಿದ್ದ ಸೀನಾ..

ಮೊದಲಭಾರಿಗೆ ರಾಕ್ಷಸನಂತೆ ನಿಂತಿದ್ದ ಚಿಕ್ಕಪ್ಪನನ್ನು ನೋಡಿ ಜನನಿ ಗಾಬರಿಯಾದಳು.. ಆದರೂ ಸುಧಾರಿಸಿಕೊಂಡು..
ಗಂಗನ ಕಾಲಿಗೆರೆಗಿ...
ಪ್ಲೀಸ್ ಚಿಕ್ಕಪ್ಪ ಅವರನ್ನ ಬಿಟ್ಟು ಬಿಡಿ ಅವರು ಈಗ ನನಗೆ ಗಂಡ.
ನೋಡಿ ನಮಗೆ ಮದುವೆ ಕೂಡ ಆಗಿದೆ ಎನ್ನುತ್ತಾ ತಾಳಿ ತೋರಿಸಿದಳು..

ಗಂಗನ ಸಿಟ್ಟು ಮತ್ತಷ್ಟು ಏರಿತು...
ತನ್ನ ಹಿಡಿತವನ್ನು ಬಿಗಿಗೊಳಿಸಿದ....

ಹೇಯ್ ಜನನಿ ನೀನ್ ಇನತಃ ನೀಚ ಕೆಲಸ ಮಾಡ್ತೀಯ ಅನ್ಕೊಂಡ್ ಇರಲಿಲ್ಲಾ..
ನಮ್ಮಣ್ಣ ಹೇಳಿದ್ದಾನೆ ಅವನ್ನ ಕೊಂದು ನನ್ನ ಮಗಳನ್ನ ಕರ್ಕೊಂಡ್ ಬಾ, ಅವಳು ಬರಲ್ಲ ಅಂದ್ರೆ ಅವಳನ್ನೂ ಕೊಲ್ಲು
ನನಗೆ ಮಗಳಿಗಿಂತ ಮಾನ ದೊಡ್ಡದು ಅಂದಿದ್ದಾನೆ,
ಅಪ್ಪನ ಮಾತನ್ನ ನೀನು ಮೀರಬಹುದು ಅಣ್ಣನ ಮಾತನ್ನ ನಾನು ಮೀರಲ್ಲಾ..

ಆ ಮಾತುಗಳು ಅವಳನ್ನು ಮತ್ತಷ್ಟು ಹೆದರಿಸಿದವು,
ಸೀನನ ಬೆರಳ ತುದಿಗೆ ಮಚ್ಚು ತಾಗುತ್ತಿತ್ತು ಆದರೆ ಕೈಗೆ ಸಿಗುತ್ತಿರಲಿಲ್ಲಾ..

ಗಂಗಾ ಜನನಿಯನ್ನು ಎಗ್ಗರಿಸಿ ಒದ್ದ..
ಅವಳು ಟೇಬಲ್ ಗೆ ತಾಗಿ ಬಿದ್ದಳು...

ಸೀನ ಅವಳ ದ್ವನಿ ಕೇಳಿ ಎಚ್ಚರಿಸಿಕೊಳ್ಳುತ್ತಿದ್ದ,
ಕೈಗೆ ಮಚ್ಚು ಸಿಕ್ಕಿದ್ದೇ ತಡಮಾಡದೆ ಬೀಸಿದ್ದೆ,
ಗಂಗನ ಎಡಗೈ ತುಂಡಾಗಿ ನೆಲಕ್ಕೆ ಬಿತ್ತು,
ಆ ಪ್ರಾಣ ಹೋಗುವಂತಹ ನೋವಿಗೆ ಅವನ ಕಣ್ಣುಗಳು ಮಂಜಾದವು,
ಅರೆಪ್ರಜ್ಞೆಯಲ್ಲಿಯೇ ,
ಸೀನ ಮಚ್ಚನ್ನು ಬೀಸಾಕಿ ಜನನಿಯ ಕೈ ಹಿಡಿದು ಹೊರಟ ದೃಶ್ಯ ಕಾಣುತ್ತಾ ಜ್ಞಾನ ತಪ್ಪಿದ ಗಂಗಾ ..
ಸಮಯ ಸಂಜೆ ಏಳು....

ಅಕ್ಕಪಕ್ಕದವರು ವಿಷಯ ತಿಳಿದು ಗಂಗಾನನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಸಮಯ ಹತ್ತಾಗಿತ್ತು,

ರಂಗನಿಗೆ ಕರೆ ಮಾಡಿ ವಿಷಯ ತಿಳಿಸಿದ ಕೂಡಲೇ ಧಾವಿಸಿ ಬಂದ,
ಅಲ್ಲಿದ್ದ ಹುಡುಗರನ್ನು...
ಏನ್ ಆಯ್ತೋ ಏನ್ ಅಯ್ತ್ರೋ ಅಂತಾ ಭಯದಿಂದಲೇ ಕೇಳುತ್ತಿದ್ದವನಿಗೆ,

ಅಣ್ಣಾ, ಸೀನ ಅಣ್ಣನ ಕೈ ಕತ್ತರಿಸಿ ಓಡಿಹೋಗಿದ್ದಾನೆ,

ಏನು ಆ ಬೇವರ್ಸಿ ನಾ...ಅವನ್ನ ತುಂಡು ತುಂಡು ಮಾಡೋವರೆಗೂ ನನಗೆ ಸಮಾಧಾನ ಇಲ್ಲಾ ಕಣ್ರೋ ಇಲ್ಲಾ..
ಎನ್ನುತ್ತಾ ತನಗೆ ತಿಳಿದ ಎಲ್ಲರಿಗೂ ಕರೆ ಮಾಡಿ
ತನ್ನ ಮಗಳನ್ನು ಒಬ್ಬ ಹುಡುಗ ಅಪಹರಿಸಿದ್ದಾನೆ,
ಅವನ್ನ ಹುಡುಕಿ ಕೊಂದು ಅವಳನ್ನ ಕರ್ಕೊಂಡ್ ಬರೋರಿಗೆ ಹತ್ತು ಲಕ್ಷ ಕೊಡ್ತೀನಿ ಎಂದು ಹೇಳಿದಾ...

ಸಮಯ ಹನ್ನೊಂದು ವರೆ....
ಗಂಗಾನಿಗೆ ಪ್ರಜ್ಞೆ ಬಂತು ಎಂದು ಡಾಕ್ಟರ್ ಹೇಳಿದ್ದ ತಕ್ಷಣ
ಅವನಿದ್ದ ಕೊನೆಗೆ ಹೋದ ರಂಗ....

ಏನೋ ಹೀಗೆ ಆಯ್ತಲ್ಲ ಹೋಗಿ ಹೋಗಿ....
ಛೆ.... ಬಿಡು ಅವನ್ನ ಸುಮ್ನೆ ಬಿಡಲ್ಲ ಕಣೋ
ನನ್ನ ತಮ್ಮನ ಕೈ ಕತ್ತರಿಸಿದವನ ತಲೆ ಬಿಟ್ಟು ಉಳಿದಲ್ಲವನ್ನೂ ಕತ್ತರಿಸಿ ನಿನ್ನ ಮುಂದೆ ಹಾಕ್ತೀನಿ ಕಣೋ..
ಎಂದು ಆಕ್ರೋಶದಿಂದ ಕೂಗಾಡಿದ...
ಆ ಕೋಪದಲ್ಲೂ ತನ್ನ ಸ್ಥಿತಿ ಕಂಡು ಅವನಿಗೆಯೇ ತಿಳಿಯದೆ ಕಣ್ಣುಗಳು ತುಂಬಿದ್ದವು...

ಹೇಗಿದ್ದೀಯೋ ಗಂಗಾ?

ಆ ನೋವಿನಲ್ಲೂ... ಪರವಾಗಿಲ್ಲ ಅಣ್ಣಾ.. ನೀನ್ ಬೇಜಾರ್ ಆಗಬೇಡ. ನಿನಗಾಗಿ ಜೀವಾನೂ ಕೊಡೋನು ನಾನು ಇದೇನ್ ಒಂದ್ ಕೈ ತಾನೇ....

ನಿನ್ನ ಈ ಸ್ಥಿತಿಗೆ ಕಾರಣನಾದ ಆ ಸೀನನ್ನ ಸುಮ್ನೆ ಬಿಡಲ್ಲ ಕಣೋ ಬಿಡಲ್ಲಾ..

ಅಣ್ಣಾ ನನ್ನ ಕೈ ಕತ್ತರಿಸುವಷ್ಟು ಅವನಿಗೆ ತಾಕತ್ತು ಇದೆ ಅಂತ ನಿನಗೆ ಅನ್ನಿಸುತ್ತಾ? ಎಂದು ತಣ್ಣಗೆ ಕೇಳಿದ....

ಅಂದ್ರೆ?????

ಅಣ್ಣನ ಮುಖವನ್ನು ನೋಡಿ ಹೇಳಲಾಗದೆ ನೆಲವನ್ನು ನೋಡುತ್ತಾ..
ಜನನಿ........


ಒಂದು ಕ್ಷಣ ಸಿಡಿಲು ಬಂದಿದಂತೆ ನಿಂತು ಬಿಟ್ಟ ರಂಗ....
ಉಸಿರಾಡುವ ಸುದ್ದೂ ಕೇಳುವಷ್ಟು ನೀರವ ಮೌನವನ್ನು ಸೀಳಿ..
ಮೊಬೈಲ್ ರಿಂಗಣಿಸಿತು...
ಹಾಗೆ ತೆಗೆದು ಕಿವಿಗಿಟ್ಟುಕೊಂಡ...

ಅಣ್ಣಾ ನಾನು ಬಡ್ಡಿ ಬಾಬು...
ಏನಾದರೂ ಅರ್ಜೆಂಟ್ ಆಗಿ ಹಣ ಬೇಕಿತ್ತಾ ಅಣ್ಣ?

ಹಣ ಬೇಕು ಅಂತ ನಾನ್ ಏನಾದ್ರೂ ಕೇಳಿದ್ನ?
ಎಂದು ಕೋಪದಿಂದ ಕೇಳಿದ...

ಇಲ್ಲಣ್ಣ ಆಗಲೇ ಪುಟ್ಟಿ ಬಂದಿದ್ಲು,
ಅಪ್ಪಂಗೆ ಅರ್ಜೆಂಟ್ ಆಗಿ ಸ್ವಲ್ಪ ಹಣ ಬೇಕಿತ್ತು ಅಂತ ಕೇಳಿದ್ಲು
ನಾನು ಐದು ಲಕ್ಷ ಕೊಟ್ಟು ಕಳುಹಿಸಿದೆ....

ಯಾವಾಗ?

ಒಂದು ಎಂಟು ಗಂಟೆ ಇರಬಹುದು?

ಜೊತೆ ಯಾರಿದ್ರು?

ಯಾರೋ ಹುಡುಗ ಇದ್ದ ಅವನು ಹೊರಗೆ ನಿಂತಿದ್ದ,
ಅದೇ ಇನ್ನೂ ಏನಾದ್ರೂ ಹಣ ಬೇಕೇನೋ ಅಂತ ಕಾಲ್ ಮಾಡ್ದೆ,

ನಿನ್ನ ಹಣ ಬೆಳಗ್ಗೆನೇ ಬಂದು ಸೇರುತ್ತೆ...
ಏನ್ ಅರ್ಜೆಂಟ್ ಇಲ್ಲಾ......
ಹೇಳುತ್ತಾ ಇದ್ದ ಕರೆ ಕಟ್ ಮಾಡಿದ ರಂಗ...


ಐದು ನಿಮಿಷಗಳ ನಂತರ ಮತ್ತೆ ಮೊಬೈಲ್ ರಿಂಗಣಿಸಿತು...

ಹೇಳೋ ಎಂದ ರಂಗನಿಗೆ
ತುಸು ಭಯ ಮಿಶ್ರಿತ ನಡುಗುವ ದನಿಯಲ್ಲಿಯೇ,
ನಾನು ಜನನಿ ....

ಒಳ್ಳೆಯ ಕೆಲಸ ಮಾಡಿದೆ ತಾಯಿ ಒಳ್ಳೆಯ ಕೆಲಸ ಮಾಡಿದೆ,
ಹೆಗಲ ಮೇಲೆ ಎತ್ತಾಡಿಸಿದ ಚಿಕ್ಕಪ್ಪನ ಕೈ ಕತ್ತರಿಸುವಷ್ಟು ನಿನ್ನ ಕಣ್ಣು ಪ್ರೀತಿಯಿಂದ ತುಂಬಿದೆ ಅಲ್ವ ?

ನನಗೂ ಆ ನೋವು ಇದೆ ಅಪ್ಪಾ....
ಆದರೆ ಸೀನಾ ಈಗ ಬರೀ ನನ್ನ ಪ್ರೇಮಿ ಅಲ್ಲ ನನ್ನ ಗಂಡ..
ಅವರಿಗೆ ಒಂದು ಅಂದ್ರೆ ನಾನ್ ಸುಮ್ನೆ ಇರಲ್ಲಾ..
ಚಿಕ್ಕಪ್ಪನ ಕಾಲಿಗೆ ಬಿದ್ದು ಕೇಳಿಕೊಂಡಿದ್ದೀನಿ,
ಅವರು ನನ್ನ ಮಾತಿಗೆ ಕಿವಿಗೊಡಲಿಲ್ಲ...
ಒಂದು ವೇಳೆ ಅವರ ಕೈ ನಾನು ಕತ್ತರಿಸದೆ ಇದ್ದಿದ್ದರೆ
ಅವರು ಸೀನನ್ನ ಕೊಂದಿರೋರು....

ಓಹ್ ಏನೋ ಒಂದು ಅರಶಿನ ದಾರ ಕಟ್ಟಿದ ಮಾತ್ರಕ್ಕೆ
ಅದು ಮದುವೆ? ಅವನು ನಿನ್ನ ಗಂಡ ಆಗ್ತಾನ?

ಬಾಳೋದು ನಾವಿಬ್ಬರೇ ಹಾಗಾಗಿ ನಮಗಷ್ಟೇ
ಅದು ದಾರನ ತಾಳಿನ ಅನ್ನೋದು ಮುಖ್ಯವಾಗೋದು...

ನೋಡು ಜನನಿ ನಾನು ತುಂಬಾ ಶಾಂತವಾಗಿ ಹೇಳ್ತಾ ಇದ್ದೀನಿ ಅದು ಇಷ್ಟೆಲ್ಲಾ ಅದ ಮೇಲೂ..
ನೀನು ಅವನ್ನ ಬಿಟ್ಟು ಬಾ, ಅವನಿಗೆ ಏನೂ ಮಾಡಲ್ಲ..
ನಿನ್ನನ್ನೂ ಒಂದು ಒಳ್ಳೆಯ ಕಡೆ ಮದುವೆ ಮಾಡ್ತೀನಿ....

ಆಗಲ್ಲಪ್ಪ...ಅದನ್ನ ಹೇಳಕ್ಕೆ ನಿನಗೆ ಕಾಲ್ ಮಾಡಿದ್ದು,
ನಮ್ಮ ಪಾಡಿಗೆ ನಮ್ನ ಬದುಕಿಕ್ಕೆ ಬಿಟ್ಟು ಬಿಡಿ,
ನಾವು ಬೇಕಿದ್ದರೆ ನಿಮ್ಮ ಕಣ್ಣಿಗೆ ಬೀಳದಂತೆ ಎಲ್ಲೋ ಇರುತ್ತೇವೆ...

ಮಗಳೇ ಮತ್ತೆ ಮತ್ತೆ ಹೇಳ್ತಾ ಇದ್ದೀನಿ...
ಅನ್ನ ತಿನ್ನಿಸಿದ ಕೈಯಿಂದ ಅಕ್ಕಿಕಾಳು ಹಾಕೋ ಹಾಗೆ ಮಾಡ್ಬೇಡ,
ನನ್ನ ಮರ್ಯಾದೆ ಹೋಗಕ್ಕೂ ಮುನ್ನ ಮನೆ ಸೇರ್ಕೋ....


ನಾನು ಅದೇ ಉತ್ತರ ಹೇಳ್ತೀನಿ ಆಗಲ್ಲಾ..
ನಂಗೆ ನಿಮ್ಮ ಒಂದು ಪೈಸೆ ಬೇಡ ಅಂತಾನೆ ಹಾಕಿದ್ದ ಒಡವೆಗಳನ್ನೂ ಮನೆಯಲ್ಲಿಯೇ ಇಟ್ಟುಬಂದೆ,
ಯಾವಾಗ ನೀವ್ ನಮ್ಮ ಸ್ವಂತ ಉಸಿರನ್ನೇ ತೆಗೆಯುತ್ತೇವೆ ಅಂತೀರೋ ನಿಮ್ಮನ್ನ ಎದುರಿಸಕ್ಕೆ ನಿಮ್ಮಿಂದಲೇ ಹಣ ತಗೊಂಡೆ...ಬಡ್ಡಿ ಬಾಬು ಕಾಲ್ ಮಾಡಿರಬೇಕಲ್ವ ?
ಬೇಗ ಕೊಟ್ಟು ಬಿಡಿ ಇಪತ್ತು ಪರ್ಸೆಂಟ್ ಬೇರೆ....
ಟೈಮ್ ಆದ್ರೆ ಜಾಸ್ತಿ ಆಗುತ್ತೆ,

ನೋಡು ನನಗೆ ಹಣಕಿಂತ ನನ್ನ ಹೆಸರು ಮುಖ್ಯ,
ಮಾರ್ಕೆಟ್ ನಲ್ಲಿ ನಾನ್ ಮಾಡಿರೋ ಅಷ್ಟು ಹೆಸರೂ ಮಣ್ಣಲ್ಲಿ ಮಣ್ಣಾಗಿ ಬಿಡುತ್ತೆ,
ಆಮೇಲೆ ಖಂಡಿತ ನಾನ್ ನಿಮ್ನ ಕ್ಷಮಿಸಲ್ಲ ಜೀವಂತ ಇಬ್ಬರ್ನೂ ಹೂತಿ ಬಿಡ್ತೀನಿ ಮಗಳು ಅಂತಾನೂ ನೋಡಲ್ಲ.
ಇಲ್ಲಿಯವರೆಗೂ ನನ್ನ ನಿನ್ನ ತಂದೆಯಾಗಿ ನೋಡಿದ್ದೀಯಾ
ಶತ್ರುವಾಗಿ ನೋಡಕ್ಕೆ ಆಸೆ ಪಡಬೇಡ
ಆಮೇಲೆ ನಿನ್ನಿಂದ ತಡ್ಕೊಲಕ್ಕೆ ಆಗಲ್ಲಾ..

ಅಪ್ಪಾ....ಬದುಕೊಕ್ಕಾಗಿ ಸಾಯೋವರೆಗೂ ಹೊರಡಲು ಸಿದ್ಧ ನಾವು,
ನಾನು ನಿನ್ನ ಮಗಳು ನಿನಗಿರೋ ಅಷ್ಟು ಹಠ ನನಗೂ ಇದೆ. ನನ್ನ ತಾಳಿ ಮೇಲೆ ಕೈ ಇಟ್ಟಿದಕ್ಕೆ ಚಿಕ್ಕಪ್ಪನ ಕೈ ಏನಾಗಿದೆ ಅಂತ ನೋಡು ಇನ್ನು ತಲೆ ಇಟ್ಟರೆ.......

ಹೇಯ್ ಜನನಿ ನೀನ್ ಮಾತಾಡೋದು ನೋಡಿದ್ರ್ತೆ ನೀನು ಈ ರಂಗನಿಗೆ ಹುಟ್ಟಿಲ್ಲ ಅನ್ನಿಸುತ್ತೆ...

ತಪ್ಪಪ್ಪ...ಇಷ್ಟೆಲ್ಲಾ ಧೈರ್ಯವಾಗಿ ಮಾತಾಡ್ತಾ ಇದ್ದೀನಿ ಈವನ್ ಮಾಡಿ ನಿನ್ನ ಕಣ್ಣ ಮುಂದೆ ತೋರಿಸಿದ್ದೀನಿ ಈಗಲೂ ನಿನ್ನ ಮಗಳನ್ನ ಅಂದ್ರೆ ಹೆಂಗೆ ಡಿಎನ್ಎ ರಿಪೋರ್ಟ್ ಬೇಡಾ,
ಚಿಕ್ಕಪ್ಪನ ಕೈಗೆ ಏನಾಗಿದೆ ಅಂತ ಬರೋ ರಿಪೋರ್ಟ್ ನೋಡು ನನ್ನ ಕೋಪ ಏನು ಅಂತ ತಿಳಿಯಕ್ಕೆ,
ಭಾವನೆ ಇಲ್ಲದ ಮನುಷ್ಯರ ಮುಂದೆ ಕಣ್ಣೀರು ವೇಸ್ಟ್
ಕಾಲ್ ಮಾಡಿದ್ರೆ ಕರನ್ಸಿನೂ ವೇಸ್ಟ್ ಅಂತ ಈಗಲೇ ತಿಳಿದಿದ್ದು,
ಚಿಕ್ಕಪ್ಪನ ಹುಷಾರ್ ಆಗಿ ನೋಡಿಕೋ..
ಅವರ ಬಳಿ ನಾನ್ ಕ್ಷಮೆ ಕೇಳಿದೆ ಅಂತ ಹೇಳು...
ಟೇಕ್ ಕೇರ್ ಬೈ.....

----------------------------------------------------------------------------------------------------------------------
ಇತ್ತ ಒಂದು ದೇವಸ್ಥಾನದ ಆವರಣದಲ್ಲಿ,
ಜನನಿ-ಸೀನ ಇಬ್ಬರೂ ಕುಳಿತು ತಮ್ಮ ಮುಂದಿನ ಪ್ಲಾನ್ ಬಗ್ಗೆ ಯೋಚಿಸುತ್ತಿದ್ದರು,

ದೀರ್ಘ ಆಲೋಚನೆಯ ಬಳಿಕ,
ಸೀನಾ ಇನ್ನು ಈ ವಿಷಯನ ನಾನು ಹ್ಯಾಂಡಲ್ ಮಾಡ್ತೀನಿ ,
ಇದು ನಿಮ್ಮ ಮನೆಯವರ ವಿಷಯ ಅಲ್ಲ ನಮ್ಮ ಮನೆಯವರದು
ಇನ್ನು ಅವರ ಒಂದೊಂದು ಹೆಜ್ಜೆ ಹೇಗಿರುತ್ತೆ ಅಂತ ನಾನು 
ಮಾತ್ರವೇ ಊಹಿಸಬಲ್ಲೆ,
ಅದಕ್ಕೆ ತಕ್ಕ ಹಾಗೆ ಯೋಚನೆ ನಾನ್ ರೂಪಿಸ್ತೀನಿ,
ವಿಷಯ ಸರಳವಾಗಿರುತ್ತೆ ಅನ್ಕೊಂಡೆ ಬಟ್ ಅದು ಈಗ ಕೈ ಮೀರಿದೆ,

ಕೈ ತೆಗೆದ್ರೆ ಕೈ ಮೀರದೆ ಏನ್ ಆಗುತ್ತೆ.
ಎಂದು ಗೊಣಗಿದ ಸೀನ,

ಏನ್ ಅಂದೇ.

ಏನಿಲ್ಲ ಬಿಡು, ಈಗ ಅವರನ್ನ ಹೇಗೆ ಎದುರಿಸೋದು
ಅವರಿನ ಹಣ/ಜನ ಬೆಂಬಲ ಇದೆ .
ಅವರನ್ನ ಎದುರು ಹಾಕೊಂಡು ಬಾಳೋದು ಬಹಳ ಕಷ್ಟ ಇದೆ,

ನೋಡು ಸೀನ ಈಗ ಒಂದು ಹೆದರ ಬೇಕು ಅಥವಾ ಎದುದು ನಿಲ್ಲಬೇಕು ಹೆದರಕ್ಕೆ ಆಗಲ್ಲ ಸೊ ಎದುರಿಸೋಣ,
ಇಲ್ಲದಿದ್ದರೆ ನಮ್ಮನ್ನ ಬಾಳಕ್ಕೆ ಅವರು ಖಂಡಿತ ಬಿಡಲ್ಲ..
ನಮ್ಮ ತಂದೆ ಮಾನಕ್ಕೆ ಅಂಜಿ ನಮ್ಮನ್ನ ಕೊಲ್ಲಕ್ಕೂ ಹೆಸೋರಲ್ಲ ಅವರು,

ಸರಿ ನಾವು ಊರ್ ಬಿಟ್ಟು ಹೋಗೋಣ..
ಎಲ್ಲೋ ಹೋಗಿ ಬದುಕೋಣ ,

ಅದು ಈಗ ಆಗಲ್ಲ ಸೀನಾ ಕಾಲ ಮೀರಿದೆ
ಹಾಗೆ ಮಾಡಿದ್ರೆ ಅದಕ್ಕಿಂತ ದೊಡ್ಡ ತಪ್ಪು ಇನ್ನೊಂದು ಇರಲ್ಲ
ಕಾರಣ ನಮ್ಮನ್ನ ಹೇಗಾದರೂ ಮಾಡಿ ಹುಡುಕಿ
ಅಲ್ಲೇ ಕೊಂದು ಬಿಡ್ತಾರೆ,
ಆಮೇಲೆ ಇಲ್ಲಿ ಬಂದು ಎಲ್ಲೋ ಓಡಿ ಹೋಗಿದ್ದಾರೆ ನಮ್ಮ ಕೈಯಲ್ಲೂ
 ಸಿಗಲಿಲ್ಲ ಅಂತಾರೆ ಜನರೂ ಸುಮ್ನಾಗಿ ಬಿಡ್ತಾರೆ
ಇವರು ಹಲವಾರು ಸಲ ಹಾಗೆ ಮಾಡಿರೋರೆ,
ಇಲ್ಲೇ ಇದ್ದರೆ ನಮ್ಮನ್ನ ಕೊಲ್ಲೋದು ಅಥವಾ ಕೊಂದ ಮೇಲೆ ಇವರು ಬಚಾವ್ ಆಗೋದು ಕಷ್ಟ ಆಗುತ್ತೆ,
ಅದಕ್ಕಾಗಿಯೇ ನಾವು ಇಲ್ಲೇ ಇರಬೇಕು...
ಸಧ್ಯಕ್ಕೆ ನನಗೊಂದು ಜಾಗ ನೆನಪಾಯಿತು ಅಲ್ಲಿ ಇರೋಣ
ಅದು ಯಾರಿಗೂ ಅಷ್ಟು ಬೇಗಾ ಅನುಮಾನ ಬರದಂತ ಜಾಗ,

ಯಾವ ಜಾಗ ಜನನಿ?

ನಮ್ಮಪ್ಪನ ಗೋಡೌನ್!

ಏನು, ಹುಲಿಗೆ ಹೆದರಿ ಗುಹೆಯಲ್ಲಿ ಬಚ್ಚಿಟ್ಟುಕೊಂಡ ಹಾಗೆ ಆಗುತ್ತೆ,

ಹಾಗೆ ಅನ್ಕೊಬೇಡ ಅದೊಂದು ದೊಡ್ಡ ಗೋಡೌನ್
ಅಲ್ಲಿ ಹಳೆ ಕಾರು ಆಟೋ ಎಲ್ಲಾ ಸೀಸ್ ಮಾಡಿದಾಗ ತಂದು ನಿಲ್ಲಿಸುತ್ತಾರೆ,
ಅಲ್ಲಿಗೆ ಅವರು ಬರೋದು ಸಹ ಅಪರೂಪ,
ಅದೇ ಬೆಸ್ಟ್ ಪ್ಲೇಸ್, ಮುಂದೆ ಡೋರ್ ಇದೆ
ಅದರ ಬೀಗ ಇಲ್ಲ ಹೋಗುವಾಗ ಒಂದು ಹೊಸ ಬೀಗ ತಗೊಳೋಣ,
ಮೊದಲು ನಾನು ಹೋಗ್ತೀನಿ ಹೋಗಿ ಪರ್ಸ್ ಎಲಾ ಹುಡುಕೋ ಹಾಗೆ ಮಾಡಿ ಬೀಗ ಸಿಗಲಿಲ್ಲ ಅಂತ ಕಲ್ಲು ತಗೊಂಡು ಹೊಡಿತೀನಿ,
ನೀನು ರೋಡ್ ನಲ್ಲಿ ಹೋಗುವವನ ಹಾಗೆ ಬಾ ಸಹಾಯಕ್ಕೆ ಕರಿತೀನಿ
ಬಂದು ಕಲ್ಲಲ್ಲಿ ಹೊಡೆದು ಹೋಗು,
ನಾ ಬೀಗ ತೆಗೆದು ಒಳಗೆ ಹೋಗಿ ಹಿಂದಿನ ಡೋರ್ ನ ಚಿಲಕ ತೆಗೆದು ಬಿಟ್ಟು ಮತ್ತೆ ಬಂದು ಮುಂದೆ ಮುಚ್ಚಿಕೊಂಡು ಹೊಸ ಬೀಗ  ಜಡಿದು,
ಹೊರಟು ಬಿಡ್ತೀನಿ ಸಂಜೆ ಆಗುತ್ತಾ ಇದ್ದ ಹಾಗೆ ಇಬ್ಬರೂ ಹಿಂದಿನಿಂದ ಹೋಗಿ ಸೇರಿಕೊಳ್ಳೋಣ,
ಅಲ್ಲೊಂದು ವಾರ ಸಾಕು ಆಮೇಲೆ ಇನ್ನೊಂದು ಯೋಚನೆ ಮಾಡೋಣ ಸಧ್ಯಕ್ಕೆ ಅವರು ನನ್ನ ನಿನ್ನ ಎಲ್ಲಾ ಫ್ರೆಂಡ್ಸ್ ಮನೆ ಹುಡುಕುತ್ತಾ ಇರುತ್ತಾರೆ,

ಹೇಳುತ್ತಾ ಇದ್ದ ಜನನಿಯನ್ನೇ ಕಣ್ಣು ಮಿಟುಕಿಸದೆ ನೋಡುತ್ತಿದ್ದ ಸೀನ,

ಯಾಕಪ್ಪ ಹಾಗೆ ನೋಡ್ತಾ ಇದ್ದೀ..

ಅಬ್ಬಾ ಏನೇನ್ ಪ್ಲಾನ್....

ಬದುಕ ಬೇಕು ಅಂತ ಡಿಸೈಡ್ ಮಾಡಿದ ಮೇಲೆ ಸಾಯೋವರೆಗೂ ಹೋರಾಡಲೇ ಬೇಕಪ್ಪ...

ಅದು ದಿಟವೇ..

ಮಾರನೆಯ ದಿನ...
ಯೋಚನೆಯಂತೆ ಗೋಡೌನ್ ಬಳಿ ಬಂದು ಬ್ಯಾಗ್ ನಲ್ಲಿ ತಡಕಾಡುತ್ತಿದ್ದಳು ಅವಳನ್ನು ನೋಡುತ್ತಾ ಹಾದುಹೋಗುತ್ತಿದ್ದರು ಆಗೊಮ್ಮೆ  ಈಗೊಮ್ಮೆ ಪಾದಚಾರಿಗಳು,
ರಸ್ತೆಯಲ್ಲಿ ಹೋಗುವ ಸೀನನ ಕರೆದು ಸಹಾಯ ಪಡೆದು,
ಎಲ್ಲವನ್ನೂ ಮುಗಿಸಿ,

ಸಂಜೆ ಐದರ ಸಮಯದಲ್ಲಿ ಇಬ್ಬರೂ ಬಂದು ಆ ಹೊಸ ಗೂಡು ಸೇರಿಕೊಂಡರು.

ಇತ್ತ ಆಕ್ರೋಶದಿಂದ ಹಗಲಿರುಳು ಎನ್ನದೆ
ಮಗಳನ್ನು ಊರೆಲ್ಲಾ ಹುಡುಕುತ್ತಿದ್ದ ರಂಗ..

ಮುಂಜಾನೆ ಎಂದ ಜೋಡಿಗಳು....
ಬ್ಯಾಗ್ ನಲ್ಲಿದ್ದ ಬಿಸ್ಕೆಟ್ ತಿಂದು,
ಸೀನ ತಗೋ ಇದರಲ್ಲಿ ಸ್ವಲ್ಪ ಹಣ ಇದೆ
ಹೋಗಿ ಹೊಸ ಮೊಬೈಲ್ ಮತ್ತು ಸಿಮ್ ತಗೋ
ಹಾಗೆ ಬ್ರೆಡ್ ಬನ್ನು ಬಿಸ್ಕೆಟ್ ಹಾಲು, ಒಂದು ಸಣ್ಣ ಸ್ಟೋವ್ ತಗೋ,

ಮೊಬೈಲ್ ಯಾಕೆ ಜನನಿ?

ಅದು ಬೇಕೇ ಬೇಕು, ಫ್ರೆಂಡ್ಸ್ ಜೊತೆ ಟಚ್ ನಲ್ಲಿ ಇದ್ರೇನೆ,
ನಮ್ಮ ವಿಷಯ ನಾಳೆ ಅವರಿಗೂ ತಿಳಿದಿರುತ್ತೆ ಇಲ್ಲದಿದ್ದರೆ
ಒಂದು ವೇಳೆ ನಮ್ಮ ತಂದೆಯ ಕೈಗೆ ಸಿಕ್ಕಿ ಬಿದ್ದು ನಾವಿಬ್ಬರೂ ಸತ್ತರೆ
ನಮ್ಮ ಸಾವಿನ  ರಹಸ್ಯ ನಮ್ಮೊಂದಿಗೆ ಮಣ್ಣಾಗಿ ಬಿಡುತ್ತೆ.

ಜನನಿ ಹೇಳುವುದೂ ಸರಿ ಎಂದು ತಲೆಯಾಡಿಸುತ್ತಾ ಹೊರಟವನು ,
ಮಧ್ಯಾಹ್ನ ಹೇಳಿದ್ದೆಲ್ಲವನ್ನೂ ತಂದು ಮುಂದಿಟ್ಟ,
ತಗೋ ಜನನಿ ಹೊಸ ಮೊಬೈಲ್, ಒಂದು ನಿಮಿಷ ಇರು,
ಎಂದು ತನ್ನ ಜೇಬಿನಿಂದ ಕಾಗದದಲ್ಲಿ ಸುತ್ತಿಟ್ಟಿದ್ದ ಸಿಮ್ ಕೊಟ್ಟಾ,
ಇದೆಲ್ಲಾ ತಗೊಂಡು ಬರುವಾಗ ನನ್ನ ಹಳೆ ದೋಸ್ತಿ ಸಿಕ್ಕಿದ್ದಾಗ,
ಅವನಿಗೆ ವಿಷಯ ಹೇಳಿ ಅವನ ಮೊಬೈಲ್ ನಲ್ಲಿ ಇದ್ದ ಇನ್ನೊಂದು ಸಿಮ್ ನ ನಾ ಇಸ್ಕೊಂಡೆ,
ನಾವೇ ಹೊಸದು ತಗೊಂಡ್ರೆ ಅದು ಈಗಲೇ ಆಕ್ಟಿವ್ ಆಗಲ್ಲ ಅದಕ್ಕೆ,

ಒಳ್ಳೆಯ ಕೆಲಸ ಮಾಡಿದೆ ಸೀನ,
ಎಂದು ತನ್ನ ಗೆಳತಿಗೆ ಕರೆ ಮಾಡಿ ಸಹಾಯವನ್ನು ಕೇಳಿದಳು,
ಗೆಳತಿ ಸುಮಾಳು ಸಹ ತನ್ನನಿಂದಾದ ಯಾವುದೇ ಸಹಾಯವಾದರೂ ಮಾಡಲು ಸಿದ್ಧ ಎನ್ನುವ ಭರವಸೆ ನೀಡಿದಳು.

ಅವಳ ಮಾತು ಮುಗಿಸಿದೊಡನೆ ಸೀನ ಕೇಳಿದನು,
ಹಾಗಿದ್ರೆ ಈಗ  ನಾವು ಮೈಸೂರ್ ಗೆ ಹೋಗೋದ ಜನನಿ?

ಇಲ್ಲ ಸೀನ, ಈ ವಿಷಯದಲ್ಲಿ ಇನ್ನೂ ಒಂದು ನಿರ್ಣಯ ತಿಳಿದಿಲ್ಲಾ,
ಈಗ ನಾವು ಅಲ್ಲಿಗೆ ಹೋದ್ರೆ ನಮ್ಮಿಂದ ಅವಳಿಗೂ ತೊಂದರೆ ,
ನಮಗೆ ಇಲ್ಲೇ ಇನ್ನೂ ಮೂರು ನಾಲಕ್ಕು ತಿಂಗಳು ಇರುವ ಕೆಲಸ ಇದೆ,

ಆದ್ರೆ ಯಾವತ್ತಿದ್ದರೂ ನಮ್ಮ ಪ್ರೀತಿನ ನಿಮ್ಮ ಮನೆಯಲ್ಲಿ ಒಪ್ಪಲ್ಲ ಅಲ್ವ ?

ಹೌದು ಅವರು ನಮ್ಮನ್ನ ಹೇಗೋ ಬದುಕೊಲಿ ಏನೂ ಮಾಡಲ್ಲ ಅನ್ನೋ ಭರವಸೆ ಕೊಡಬೇಕು ಅಲ್ವ ?
ಈಗ ಅವರಿಗಿರುವ ಕೋಪಕ್ಕೆ ನಾವ್ ಸಿಕ್ಕರೆ ಅಷ್ಟೇ ನಮ್ಮ ಕಥೆ,,
ಹೀಗೆ ಭಯದಲ್ಲೇ ದಿನಗಳನ್ನು ದೂಡಿದರು ಆ ಜೋಡಿಗಳು
ಸರಿಯಾಗಿ ನಾಲಕ್ಕು ವಾರದ ಬಳಿಕ,
ಸೀನನ್ನು ಗೋಡೋನ್ ಇರುವ ಏರಿಯದಲ್ಲಿ ನೋಡಿದ್ದಾಗಿ
ಕೆಲವರು ಹೇಳಿದರು, ಹಾಗೆ ಸೀನನ, ಜನನಿಯ ಎಲ್ಲಾ ಫ್ರೆಂಡ್ಸ್ ಮನೆಯಲ್ಲೂ ಹುಡುಕಿ ಆಗಿದೆ ಅವರು ಅಲ್ಲೂ ಇಲ್ಲಾ,
ಊರು ಬಿಟ್ಟು ಹೋಗಿರುವ ಹಾಗೆ ಅನ್ನಿಸೋದು ಇಲ್ಲಾ ,
ದೀಪದ ಬುಡದಲ್ಲಿ ಕತ್ತಲುಎನ್ನುವಂತೆ ತನ್ನದೇ ನೆರಳಿನಡಿಯಲ್ಲಿ ಅಡಗಿದ್ದಾರ ? ಎಂದು ಉಯ್ಯಾಲೆ ಮೇಲೆ ಕುಳಿತು ಯೋಚಿಸುತ್ತಿದ್ದ ರಂಗ,

ಮಾರನೆಯ ದಿನ , ಗಂಟೆ ಮಧ್ಯಾಹ್ನ ಎರಡು,
ತನ್ನ ಮನೆಯಿಂದ ಐದು ಜನರ ಹುಡುಗರ ಜೊತೆ ಅಲ್ಲಿಗೆ ಹೊರಟ ರಂಗ,
ಬಂದು ಬೀಗ ತೆಗಿಯಲು ಯತ್ನಿಸಿದರೆ ಆಗುತ್ತಿಲ್ಲ,
ನೋಡಿದರೆ ಹೊಸ ಬೀಗ, ಅವನಿಗೆ ಅವರು ಇಲ್ಲಿಯೇ ಇದ್ದಾರೆ ಎಂದು ತಿಳಿಯಿತು, ತಕ್ಷಣ, ಹಿಂದಿನ ಬಾಗಿಲ ಕಡೆ ಬಂದು ನಿಂತರು,
ಒಬ್ಬಾ ಹುಡುಗ ಬಾಗಿಲಿಗೆ ಕಿವಿಯಿಟ್ಟು ಕೇಳಿದ,
ಒಳಗೆ ಏನೋ ಸದ್ದಾಗುತ್ತಿದೆ ಎಂದು ಕೈ ಸನ್ನೆಯ ಮೂಲಕ ರಂಗನಿಗೂ ತಿಳಿಸಿದ,
ಕೂಡಲೇ ಬಾಗಿಲನ್ನು ಒಡೆದು ಒಳಹೋದರು, ಹೋಗುತ್ತಾ ಇದ್ದ ಹಾಗೆ ನೆಲದಲ್ಲಿದ್ದ ಬಿಸ್ಕೆಟ್ ಪ್ಯಾಕೆಟ್, ಊಟದ ಖಾಲಿ ಪೊಟ್ಟಣ,
ಅವರು ಅಲ್ಲಿದ್ದರು ಎನ್ನುವುದನ್ನು ನಿರೂಪಿಸುತ್ತಿದ್ದವು,

ಹಾಗೆ ಒಳ ಹೋಗಿ ನೋಡಿದರೆ, ಒಳಗೆ ಸದ್ದು ಮಾಡುತ್ತಾ ಇದಿದ್ದು ಜೋಡಿ ಪಾರಿವಾಳಗಳು,
ಅವರಿಬ್ಬರೂ ಆಗಷ್ಟೇ ಅಲ್ಲಿಂದ ಓಡಿಹೋಗಿದ್ದರು,
ರಂಗ ಕೋಪದಿಂದ ಚೀರಿದ,
ಛೆ ಇಲ್ಲೇ ಅವರನ್ನ ಬಲಿ ಹಾಕಿ ಹೂತು ಬಿಡೋಣ ಅಂತಲೇ ಬಂದ್ರೆ ಈಗಲೂ ಹೇಗೋ ಎಸ್ಕಪ್ ಆದ್ರಲ್ಲ ,
ಎಂದು ಕೂಗಾಡಿದ,

ಇತ್ತ ಹೈವೆ ರಸ್ತೆಯಲ್ಲಿ ಒಂದು ಡಾಬದಲ್ಲಿ ಕುಳಿತಿದ್ದರು
ಜನನಿ-ಸೀನ!

ಅಲ್ಲಾ ಜನನಿ ನಿಂತನಿಂತಲೇ ಹೊರಡು ಅಂತ ಕರ್ಕೊಂಡು ಬಂದಲ್ಲ, ನಾವಿರುವ ಜಾಗಕ್ಕೆ ನಿಮ್ಮ ತಂದೆ ಬರೋದು ನಿನಗೆ ಹೇಗೆ ಗೊತ್ತಾಯಿತು?

ಒಂದು ವಾರದ ಹಿಂದೆ ನಾನು ಮನೆಗೆ ಕಾಲ್ ಮಾಡಿದ್ದೆ
ನನ್ನ ತಾಯಿಯಂತೆ ಸಾಕಿ ಬೆಳಸಿದ ನನ್ನ ತಾತನ ಜೊತೆ ಮಾತಾಡಬೇಕು ಅವರಿಗೆ ನಾನು ಹೀಗೆ ಮಾಡಿದಕ್ಕೆ ಕ್ಷಮೆ ಕೇಳಬೇಕು ಅಂತ. ಅವರು ಎಲ್ಲವನ್ನೂ ಕೇಳಿ
ಚೆನ್ನಾಗಿರು ತಾಯಿ, ನಿನ್ನ ಸುಖವೇ ನಮಗೆ ಬೇಕಿರೋದು ಹಣಕಾಸು ಯಾವಾಗ ಬೇಕಿದ್ದರೂ ದುಡಿದು ಗಳಿಸಬೇಕು ಮನಸಿಗೆ ಹಿಡಿಸಿದವರನ್ನ ಕಳಕೊಂಡ್ರೆ ಮತ್ತೆ ಸಿಗಲ ಅಂದ್ರು.
ತಾತ ನಾನು ನಿನ್ನ ಹತ್ರ ಇಲ್ಲಿಯವರೆಗೂ ಏನೂ ಕೇಳಿಲ್ಲ ಈಗ ಕೇಳ್ತಾ ಇದ್ದೀನಿ,
ಹೇಳು ಪುಟ್ಟಾ ನಿನಗೆ ಕೊಡೊ ಅಷ್ಟು ನನ್ನ ಹತ್ರ ಏನ್ ಇದೆ ?
ತಾತ ನಾವಿಬ್ಬರೂ ಈಗ ಅಪ್ಪನ ಗೋಡೋನ್ ನಲ್ಲೆ ಇದ್ದೀವಿ,
ನಾವಿಲ್ಲಿರೋದು ಹೇಗಾದರೂ ಅಪ್ಪ ಪತ್ತೆ ಮಾಡಿ ನಮ್ಮನ್ನ ಹುಡುಕಿಕೊಂಡು ಬರುವುದು ನಿನಗೆ ತಿಳಿದರೆ ಕೂಡಲೇ
ನನ್ನ ಈ ನಂಬರ್ ಕಾಲ್ ಮಾಡಿ ತಿಳಿಸು,
ನೀನ್ ಹೇಳಿಲ್ಲ ಅಂದ್ರೆ ನಮ್ಮನ್ನ ಖಂಡಿತ ಅಪ್ಪ ಕೊಂದಾಕಿ ಬಿಡ್ತಾರೆ,
ಅಯ್ಯೋ ಬಿಡ್ತು ಅನ್ನವ್ವ ಖಂಡಿತ ನನಗೆ ತಿಳಿದ ಕೂಡಲೇ ನಿನಗೆ ಫೋನ್ ಮಾಡಿ ಹೇಳ್ತೀನಿ ನನ್ ತಾಯಿ,
ಥ್ಯಾಂಕ್ಸ್ ತಾತ ನಿನ್ ಅರೋಗ್ಯ ನೋಡ್ಕೋ,
ಆದಷ್ಟು ಬೇಗ ನಿನ್ನ ಕಾಲಿಗೆ ಬಿದ್ದು ಆಶಿರ್ವಾದ ತಗೊಳಕ್ಕೆ ನಾನ್ ಬರ್ತೀನಿ ಬೈ ,
ಅಂತ ತಾತನ ಹತ್ರ ಮೊದಲೇ ಹೇಳಿದ್ದೆ,
ನಮ್ಮಪ್ಪನಿಗೆ ಗೊತ್ತಿಲ್ಲದ ಅವರ ಮನೆಯಲ್ಲಿಯೇ ಒಂದು ಗೂಡಾಚಾರಿಯನ್ನ ಇಟ್ಟಿದ್ದೆ ಅವರೇ ನನಗೆ ತಿಳಿಸಿದ್ದು ಹೆಂಗೆ? ಎಂದು ಕಣ್ ಹೊಡೆದಳು..

ಅಬ್ಬಬ್ಬ...ಅಪ್ಪತಪ್ಪಿ ನೀನು ಹೆಣ್ಣಾಗಿ ಹುಟ್ಟಿ ಬಿಟ್ಟಿದ್ದೀಯ ಗಂಡು ಆಗಿದ್ರೆ ಅಷ್ಟೇ ಇವತ್ತು ಮಾರ್ಕೆಟ್ ನಲ್ಲಿ ನಿಮ್ಮಪ್ಪನ್ನೇ ಮೀರಿಸೋ ಅಷ್ಟು ಹೆಸರು ಮಾಡ್ತಾ ಇದ್ದೆ ,

ಹಹಹಹ್ಹಹ ನಿಜ ನಿಜ.

ಹೋಟೆಲ್ ನಲ್ಲಿ ಉಳಿದುಕೊಂಡಿದ್ದವರಿಗೆ
ನಾಲಕ್ಕು ದಿನಗಳ ನಂತರ ಅವರು ಬಯಸಿದ ಹಾಗೆಯೇ ವಟಾರದೊಳಗೆ ಇರುವಂತೆ ಒಂದು ಪುಟ್ಟ ಹೆಂಚಿನ ಮನೆ ಸಿಕ್ಕಿತು ಬಾಡಿಗೆಗೆ,

ಅಲಿಯೇ ಸಂಸಾರ ಶುರು ಮಾಡಿದರು,

ಎರಡು ವಾರಗಳ ಬಳಿಕೆ ಆ ದಿನ ಬಂದೆ ಬಿಟ್ಟಿತು,
ಮನೆಗೆ ಬೇಕಿರುವ ದಿನಸಿ ಸಾಮಾನುಗಳನ್ನು ತರುತ್ತೇನೆ ಭದ್ರವಾಗಿ ಬಾಗಿಲು ಹಾಕಿಕೋ ಎಂದು ಹೇಳಿ
ಸೀನ ಹೊರ ಹೋದ

ಸರಿಯಾಗಿ ಅವನು ಹೋದ ಮೂರು ಗಂಟೆಗಳ ನಂತರ
ಬಾಗಿಲು ಬಡಿಯುವ ಸದ್ದಾಯಿತು,
ತೆರೆದು ನೋಡಿದರೆ ಕಂಬದಿಂದ ಬಂದ ನರಸಿಂಹನ ಹಾಗೆ
ಕೋಪದಲ್ಲಿ ಕುದಿಯುತ್ತಿದ್ದ ರಂಗ!

ಅವನ್ಬು ಕಪಾಳಕ್ಕೆ ಹೊಡೆದ ರಭಸಕ್ಕೆ ಕೆಳಗೆ ಬಿದ್ದ ಜನನಿಯ ಕೂದಲನ್ನು ಹಿಡಿದು ಮೇಲೆತ್ತಿ
ನೆನ್ನೆ ಮೊನ್ನೆ ಹುಟ್ಟಿದ ಕೂಸು ನೀನು
ನನ್ನ ವಿರುದ್ಧವಾಗಿಯೇ ನಿಲ್ಲುವ ಶಕ್ತಿ ಎಲ್ಲಿಂದ ಬಂತು ?
ಇದಕ್ಕೆಲ್ಲಾ ಕಾರಣ ಆ ನನ್ ಮಗ ಎಲ್ಲಿ?
ಕರಿ ಅವನ್ನ ಕರಿ ಎಂದು ಕೂಗಾಡುತ್ತಿದ್ದ,

ಅವರಿಲ್ಲಾ ಹೊರಗೆ ಹೋಗಿದ್ದಾರೆ,
ಅವರು ಅವರು ಏನೇ ಅವರು ಮೂರ್ ಕಾಸ್ಗೆ ಬೆಳೆ ಇಲ್ಲದ ಬೇವರ್ಸಿಗೆ ಏನೇ ಅವರು ಅವರು ಅಂತ ಮರ್ಯಾದೆ,
ನನ್ನ ಮಾನ ಮರ್ಯಾದೆ ಕಳೆಯಕ್ಕೆ ಕಾರಣ ಆಗಿದ್ದ ಅವನನ್ನ ಇಲ್ಲೇ ಹೂತೆ ಹೋಗೋದು ಬರ್ಲಿ ಬರ್ಲಿ ...
ಎನ್ನುತ್ತಾ ಅವಳನ್ನು ಕೆಳಗೆ ತಳ್ಳಿ ಚೆರ್ ಮೇಲೆ ಕುಳಿತಿದ್ದ,
ಹತ್ತು ನಿಮಿಷಗಳ ನಂತರ ಸೀನ ಬಂದು ನೋಡಿದರೆ ಬಾಗಿಲು ತೆಗೆದಿತ್ತು, ಚೆರ್ ಮೇಲೆ ರಂಗ, ಏಟು ತಿಂದು ಕೆಳಗೆ ಬಿದಿದ್ದ ಜನನಿ, ಎಲ್ಲವನ್ನೂ ನೋಡಿದವನೇ ಬಾಗಿಲನ್ನು ಹಾಕಿಕೊಂಡು ಓಡಿ ಹೋದ, ಒಳಗಿನಿಂದ ರಂಗ ಮತ್ತು ಅವನ ಇಬ್ಬರು ಹುಡುಗರು ಎಷ್ಟೇ ಬಡಿದರೂ ಯಾರೂ ತೆಗೆಯಲಿಲ್ಲ,
ಹಾಗೆ ಜನನಿಯ ಹತ್ರ ಬಂದು,
ನೋಡ್ದ ನೋಡ್ದಾನೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಾನೆ ಅಂತ ಬಂದಲ್ಲ ನೋಡು ನೋಡು,
ನಿನ್ನ ಪ್ರಾಣಕ್ಕೆ ಅಪಾಯ ಇದೆ ಅಂತ ತಿಳಿದೂ ತನ್ನ ಪ್ರಾಣ ಉಳಿಸಿಕೊಳ್ಳುವುದಕ್ಕೆ ಹೇಗೆ ಓಡಿ ಹೋದ ನೋಡ್ದ?
ಎನ್ನುತ್ತಿದ್ದ ಹಾಗೆ ರಂಗನ ಹೆಗಲ ಮೇಲೆ ಧೂಳು ಬಿತ್ತು,
ಕತ್ತು ಮೇಲೆತ್ತಿ ನೋಡಿದರೆ ಹೆಂಚನ್ನು ತೆಗೆದು ಒಳಗಿಳಿದ ಸೀನ,
ಅವನನ್ನು ನೋಡುತ್ತಾ ಇದ್ದ ಹಾಗೆ ,
ನೋಡ್ದಪ ಅವನು ಓಡಿ ಹೋಗೋನು ಅಲ್ಲಾ,
ಪ್ರಾಣಕ್ಕೆ ಪ್ರಾಣ ಕೊಡೋನು!
ಓಹ್ ಅಷ್ಟು ದೊಡ್ಡ ಹೀರೋನೋ ಇವನು ಅವನ್ನ ಹಿಡಿರೋ ಎಂದ ಕೂಡಲೇ ಇಬ್ಬರೂ ಆಳುಗಳು ಅವನನ್ನು ಹಿಡಿದುಕೊಂಡರು,
ಮನಸೋಯಿಚ್ಚೆ ರಂಗ ಅವನನ್ನು ಥಳಿಸಿದ.
ಸೀನ ಆ ನೋವಿನಲ್ಲೂ,
ನಮ್ಮ ಪ್ರೀತಿಗೆ ಇರುವ ಬಲ ತೋರಿಸಕ್ಕೆ ಬಂದಿದ್ದು
ನೋಡು ಹೊರಗೆ ಫುಲ್ ಜನರು ಸೇರಿದ್ದಾರೆ
ನೀನು ನಮ್ಮನ್ನ ಕೊಂದು ಹೋಗೋದು ಎಲ್ಲರೂ ನೋಡುತ್ತಾರೆ
ನೀನ್ ತಪ್ಪಿಸಿಕೊಳ್ಳುವ ಅವಕಾಶವೇ ಇಲ್ಲ,
ಬಿಡೋ ಪರವಾಗಿಲ್ಲ ನಿಮ್ಮನ್ನ ಕೊಂದು ಒಳಗೆ ಹೋದ್ರೂ ನನಗೆ ಖುಷಿಯೇ
ಅದು ಇನ್ನೂ ನನಗೆ ಹೆಸರು ಕೊಡುತ್ತೆ ಸ್ವಂತ ಮಗಳನ್ನೇ ಕೊಂದ ರಂಗ ಅಂತ,
ಎಂದೇಳಿ ಅವನ ಕತ್ತನ್ನು ಬಲವಾಗಿ  ಇಸುಕಿದ,

ನಮ್ಮನ್ನ ಕೊಂದು ಹೋಗಕ್ಕೆ ನಿನ್ನಿಂದ ಆಗಲ್ಲಪ್ಪ
ಎಂದು ಕಿರುಚಿದಳು ಜನನಿ,
ಅಚ್ಚರಿಯಲ್ಲಿ ತಿರುಗಿ ನೋಡಿದ,
ಸುಧಾರಿಸಿಕೊಂಡು ಮೇಲೆದ್ದು,
ನಿನ್ ಮಾಡಿದ ಅಷ್ಟು ಪಾಪದ ಕೆಲಸವನ್ನು ಲೆಕ್ಕ ಇಡುತ್ತಾ ಇದಿದ್ದೆ ನಾನು!
ಯಾರ್ ಯಾರ ತಲೆ ಹೊಡೆದು ನೀನ್ ಜಾಗ ಮಾಡಿರೋದು
ನಿನ್ನ ಒಂದೊಂದು ಅವ್ಯಾಹಾರಗಳು,
ನೀನು ಚಿಕ್ಕಪ್ಪ ಸೇರಿ ಮಾಡಿದ ಕೊಲೆಗಳು,
ಎಲ್ಲದರ ದಾಖಲೆಯ ನಕಲಿನ ಜೊತೆಗೆ
ನಾವಿಬ್ಬರೂ ಮದ್ವೆ ಅದ ಫೋಟೋಗಳನ್ನು ನನ್ನ ಫ್ರೆಂಡ್ ಹತ್ರ ಕೊಟ್ಟಿದ್ದೀನಿ,
ಒಂದು ವೇಳೆ ನಮಗೆನಾದ್ರೂ ಆದ್ರೆ ಅದೆಲ್ಲವೂ ಪೋಲಿಸ್ ಗೆ ಹೋಗುತ್ತೆ!
ನನಗೂ ಗೊತ್ತು ನಿನ್ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋದು ನಿನ್ ಮಾಡಿರೋ ಹೆಸರು ಆ ಹೆಸರೇ ಇಲ್ಲದ್ದಾಗುತ್ತೆ,
ಜೈಲಿಗೆ ಹೋಗೋದರ ಜೊತೆಗೆ ನಿನ್ನ ಅಷ್ಟೂ ಅಸ್ತಿ ಅಸ್ತಿಯಾಗಿ ಬಿಡುತ್ತೆ, ಮಾರ್ಕೆಟ್ ನಲ್ಲೂ ನಿನಗೆ ಮೂರು ಕಾಸಿನ ಬೆಲೆ ಇರಲ್ಲ!

ಈಗ ಆಯ್ಕೆ ನಿನಗೆ ಬಿಟ್ಟಿದ್ದು,
ಒಂದು ನಮ್ಮನ್ನ ಕೊಂದು ಅದರ ಜೊತೆ ನಿನ್ನೆಲ್ಲಾ ಹೆಸರು ಆಸ್ತಿ  ಮಣ್ಣಾಗೋದು!?
ಇನ್ನೊಂದು ನಾವು ನಿನ್ನ ಕಣ್ನಿಗ ಕಾಣದ ಕಡೆ ಹೋಗಿ ಬದುಕೊಲ್ತೀವಿ, ನಮ್ಮನ್ನ ಬಿಟ್ಟು ನಿನ್ನ ಮಾನ ಹಣ ಉಳಿಸಿಕೊಳ್ಳುವುದು!

ಇನ್ನೂ ಮಗಳನ್ನು ಹುಡುಕುತ್ತಲೇ ಇದ್ದಾನೆ ರಂಗ
ಅವಳು ಸಿಕ್ಕರೆ ಸಾಯಿಸಿ ಬಿಡ್ತಾನೆ ಅಂತಾನೆ ನಿನಗೆ ಹೆಸರು ಇರುತ್ತೆ
ನಾನ್ ಎಲ್ಲೋ ಇರ್ತೀವಿ!
ಈಗ ಯೋಚಿಸಿ ನಿರ್ಧಾರ ಮಾಡು!!!
ಅವಳು ಒಂದೇ ಉಸಿರಿನಲ್ಲೇ ಹೇಳಿ ಮುಗಿಸಿ ಚೆರ್ ಮೇಲೆ ಕೂತಳು...

ರಂಗ ಒಮ್ಮೆ ಎಲ್ಲವನ್ನೂ ಯೋಚಿಸಿದ ಕಿಟಕಿಯಾಚೆ ನೋಡಿದರೆ
ವಾಟರದಲ್ಲಿರುವ ಅಷ್ಟು ಜನರು ಮನೆಯ ಮುಂದೆಯೇ ಜಮಾಯಿಸಿದ್ದಾರೆ,
ಮಾಡಿರುವ ಹೆಸರನ್ನು ಕಳೆದುಕೊಂಡು ಹೆಣದಂತೆ ಬದುಕಬೇಕಾ 
ಎಂದು ಯೋಚಿಸ ತೊಡಗಿದ....

ಹತ್ತು ನಿಮಿಷಗಳ ಬಳಿಕ,
ಆಗ್ಲಿ ನನ್ನ ಕಣ್ಣಿಗೆ ಇನ್ನೊಂದು ಸಲ ನೀವ್ ಬಿದ್ರೆ
ಅದು ನಿಮಗೆ ಬಹಳ ತೊಂದರೆ ಖಂಡಿತ ಆಗ ನಿಮ್ಮನ್ನ ಬಿಡಲ್ಲ ,
ಈಗ ಬಾಗಿಲು ತೆಗಿ ಅಂದ.

ಇನೇನ್ ನಮ್ಮಜ್ಜಿ ಬರ್ತಾರೆ ಇರಿ ಅಂದಾ ಸೀನ,
ಐದು ನಿಮಿಷಗಳ ನಂತರ ಅಜ್ಜಿ ಬಂದು ಬಾಗಿಲ ಬೀಗ ತೆಗೆದು ಒಳ ಬಂದರು,
ನೋಡಿದರೆ ಸೀನ-ಜನನಿಯ ಮುಖವೆಲ್ಲಾ ರಕ್ತ ಅವರು ದಣಿದಿದ್ದರು,
ಅವರನ್ನೆಲ್ಲಾ ದುರುಗುಡುತ್ತಾ ನೋಡಿಕೊಂಡು ಹೊರಟು ಹೋದ ರಂಗ...

ಅಜ್ಜಿ ಬಳಿ ಏನೋ ಸೀನ ಇದೆಲ್ಲಾ ಅಂದರು,
ಸೀನ ಎಲ್ಲವನ್ನೂ ವಿವರಿಸಿದ,
ನಾವು ಸುಧಾರಿಸಿಕೊಳ್ಳುತ್ತವೆ ಅಜ್ಜಿ ನೀನು ಅಡುಗೆ ಮಾಡೋಗು ಎಂದು ಕಳುಹಿಸಿ, ಜನನಿಗೆ ಬ್ಯಾಂಡಿಡ್ ಹಾಕಿದ ಅವಳೂ ಅವನಿಗೆ ಹಾಕಿದಳು,
ಅಲ್ಲಾ ಜನನಿ ನಿಮ್ಮ ತಾತ ಹೇಳಿಲ್ವ ನಿಮ್ಮ ತಂದೆ ನಮ್ಮ ಮನೆಗೆ ಬರೋದು!?

ಅವರಿಗೆ ಹೇಗೆ ಗೊತ್ತಾಗುತ್ತೆ ಅಪ್ಪಂಗೆ ಬರಕ್ಕೆ ಹೇಳಿದ್ದೆ ನಾನ್ ಅಲ್ವ !!

ಏನ್ ಹೇಳ್ತಾ ಇದ್ದೀಯಾ ಗಾಬರಿಯಲ್ಲಿ ಕೇಳಿದ,

ಹೌದು ಇನೆಷ್ಟು ದಿನ ಅಂತ ಇವರಿಗೆ ಹೆದರಿಕೊಂಡು ಓಡೋದು,
ಭೂಮಿಯ ಮತ್ತೊಂದು ದಿಕ್ಕೇ ಬಂದು ಬಿಡುತ್ತೆ ಅನ್ನಿಸುತ್ತೆ ಅಷ್ಟೇ ಹೀಗೆ ಹೋದ್ರೆ,
ಅದಕ್ಕೆ ಆಗಿದ್ದು ಅಗಲಿ ಅಂತ ನಾನೇ ಕಾಲ್ ಮಾಡಿ
ಜನನಿಯ ಫ್ರೆಂಡ್ ಅಂತ ಹೇಳಿ ಅಪ್ಪನ ಜೊತೆಗಿನ ಹುಡುಗನಿಗೆ ಇಲ್ಲಿನ ಅಡ್ರೆಸ್ಸ್ ಹೇಳಿ ಅಲ್ಲೇ ಇದ್ದಾಳೆ ಜನನಿ ಅಂದೇ ಅದಕ್ಕೆ ಬಂದ್ರು!
ಈಗ ನಾವು ಆರಾಮಾಗಿ ಹೋಗಿ ಮೈಸೂರಿನಲ್ಲಿ ನಮ್ಮ ಸೂರು ಕಟ್ಕೊಬಹುದು ಯಾವ ಯಾರ ಭಯವೂ ಇಲ್ಲದೆ!

ಅಬ್ಬಾಬಾ....ಏನಮ್ಮ ನಿನ್ನ ಪ್ಲಾನ್ಸ್ ಸೂಪರ್

ಬದುಕೊಕೊಸ್ಕರ ಸಾಯೋವರೆಗೂ ಹೋರಾಡಬೇಕು,
ಇದ್ದ ಹಣದಲ್ಲಿ ಅಲ್ಲೊಂದು ಸಣ್ಣ ಮನೆ ಮಾಡ್ಕೊಂಡು ನೀನು ಒಂದು ಕಾರ್ ತಗೋ ಟ್ರಾವಲ್ಸ್ ಇದ್ದೆ ಇದೆ ಹೇಗೋ ಜೀವನ ನಡೆಯುತ್ತೆ ,

ಆದ್ರೆ ನೀನು ನಿನ್ನ ತಂದೆನ ಖಂಡಿತ ಪೋಲಿಸ್ ಗೆ ಹಿಡಿದು ಕೊಡ್ತಾ ಇದ್ದ?

ನಾವು ಚಿಕ್ಕವರು ಇದ್ದಾಗ ಊಟ ಮಾಡ್ದೆ ಇದ್ರೆ ರೋಡ್ ನಲ್ಲಿ
ಹೋಗುವ ಪೋಲಿಸ್ ನ ತೋರಿಸಿ ಹಿಡಿದುಕೊಡ್ತೀನಿ ಅಂತ ಹೆದರಿಸಿ
ಊಟ ಮಾಡಿಸೋರು ಹಾಗೆ ಈಗ ನಾವು ದೊಡ್ದವರನ್ನ ಹಾಗೆ ಹೆದರಿಸಿದ್ದೀವಿ!

ಹೆಂಗೆ ಎಂದು ಕಣ್ ಹೊಡೆದಳು,

ಸೂಪರ್ ಸೂಪರ್ ಹಹಹಹ್ಹ......
ಆದರೂ ನಿಮ್ಮ ಚಿಕ್ಕಪ್ಪ ಕೈ ಕತ್ತರಿಸಿದ್ದು ತಪ್ಪಲ್ವ ?

ಹೌದು ಸೀನ ಖಂಡಿತ ತಪ್ಪೇ,
ಆದರೆ ಅವರನ್ನ ಬಿಟ್ಟಿದ್ರೆ ನಿನ್ನ ಪ್ರಾಣ ತೆಗೆದಿರೋರು,
ನೀನ್ ಇಲ್ಲದೆ ನಾನ್ ಇರ್ತೀನಾ? ನಾನು ಆತ್ಮಹತ್ಯೆ ಮಾಡ್ಕೊಳ್ತಾ ಇದ್ದೆ,
ಈಗ ಹೇಳು ಎರಡು ಜೀವ ದೊಡ್ದದ ? ಅಥವಾ ಕೈನ ?

ಅವನಲ್ಲಿ ಮರುತ್ತರವಿಲ್ಲದೆ ಮೌನವಾದ

ಆತ್ಮ ರಕ್ಷಣೆಗಾಗಿ ಕೊಲ್ಲಲು ಬಹುದು ಅನ್ನೋ ಕಾನೂನು ಇದೆ
ನಾವೇನು ಕೊಂದಿಲ್ಲಾ, ಅಲ್ವ?
ಒಂದಲ್ಲ ಒಂದು ದಿನ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳ್ತೀನಿ
ಕ್ಷಮಿಸೋ ಕಾರ್ಯ ಅಲ್ಲ ಇದು ಆದರೂ ಕೇಳ್ತೀನಿ,

ಈಗ ನಾಳೆಯಿಂದ ನಮ್ಮ ಬದುಕು ಮೈಸೂರಿನಲ್ಲಿ ಶುರುವಾಗುತ್ತೆ
ಇಲ್ಲಿಯವರೆಗೂ ಹೋರಾಡಿದ್ದು ಪ್ರೀತಿಗಾಗಿ ಇನ್ನು ಸಂಸಾರ ಅನ್ನೋ
ಹೋರಾಟ ಅದನ್ನ ಉಳಿಸಿಕೊಳ್ಳುವುದಕ್ಕಾಗಿ....

ಮುಕ್ತಾಯ....

ಈ ಕಥೆಯಲ್ಲಿ ಬರುವ ಪಾತ್ರಗಳು ಸನ್ನಿವೇಶಗಳು
ಕೇವಲ ಕಾಲ್ಪನಿಕ..
ಇಂತಿ ನಿಮ್ಮವ -ಪ್ರಕಾಶ್ ಶ್ರೀನಿವಾಸ್ 


3 comments:

  1. CHENNAGIDHE , ONDHU PRESHNE HENNU MAKKALU ISTU GHATTI IRTHARA HETTHAVARANNA DVESHISO ASTU ????

    ANURADHA

    ReplyDelete
  2. ಚೆನ್ನಾಗಿದೆ, ಕಥೆ ಹಳೆಯದಾದರೂ ಓದಿಸಿ ಕೊಂಡು ಹೋಗತ್ತೆ, ಪ್ರಾಸ ಬದ್ದ ಸಂಭಾಷಣೆ ಚೆನ್ನಾಗಿದೆ, ಕುತೂಹಲ ಉಳಿಸಿದೆ ಹೆದರದೆ ಚಿಕ್ಕಪ್ಪನ ಕೈನೆ ತುಂಡು ಮಾಡಿದ್ದಾಳೆ ದೈರ್ಯದ ಹುಡುಗಿ ಬದುಕುತಾರೋ ಇಲ್ಲ ಎಲ್ಲ ಕಥೆಗಳ ಹಾಗೆ ಮರ್ಯಾದೆ ಹತ್ಯೆ ಆಗತ್ತಾ ಇಲ್ಲ ಮದುವೆ ಆಗಿ ಮರ್ಯಾದೆಯಾಗಿ ಜೀವನ ನಡೆಸ್ತರೋ ಅನ್ನೋ ಕುತೂಹಲ ಉಳಿದಿದೆ..... ಪದ್ಮ ಪ್ರಿಯ

    ReplyDelete
  3. Mukhya chennagidhe :) (y)
    An

    ReplyDelete